
ರಾಹುಲ್ ಗಾಂಧಿ
ನವದೆಹಲಿ: ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಪ್ರತಿಯೊಂದು ಕ್ಷೇತ್ರದಲ್ಲೂ ‘ಏಕಸ್ವಾಮ್ಯ’ವನ್ನು ಸೃಷ್ಟಿಸುತ್ತಿದೆ’ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಭಾರತದ ಆರ್ಥಿಕತೆ ನಿಯಂತ್ರಣವನ್ನು ಪುನಃ ಎಂಎಸ್‌ಎಂಇಗಳ ಕೈಗೆ ನೀಡಬೇಕೆಂದು’ ಒತ್ತಾಯಿಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಿರುವ ಅವರು, ಅತಿಸಣ್ಣ, ಸಣ್ಣ ಮತ್ತು ಮಧ್ಯಮವರ್ಗದ ಕೈಗಾರಿಕಾ ವಲಯದ ಐಸ್‌ಕ್ರೀಂ ತಯಾರಕ ಕಂಪನಿಗಳ ನಿಯೋಗವನ್ನು ಭೇಟಿಯಾಗಿ, ಅವರ ಸಮಸ್ಯೆಗಳನ್ನು ಆಲಿಸಿದ ನಂತರ ಸಾಮಾಜಿಕ ಜಾಲತಾಣವೊಂದರಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
‘ಒಬ್ಬರು ಅಥವಾ ಇಬ್ಬರು ಎಲ್ಲ ಕ್ಷೇತ್ರಗಳ ಮೇಲೆ ಹಿಡಿತ ಸಾಧಿಸುತ್ತಿರುವುದು ಭಾರತಕ್ಕೆ ಅಂಟಿರುವ ಶಾಪ. ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಎಲ್ಲ ಕ್ಷೇತ್ರಗಳಲ್ಲೂ ಒಬ್ಬರು ಅಥವಾ ಇಬ್ಬರ ಪಾರಮ್ಯಕ್ಕೆ ಅವಕಾಶ ಕಲ್ಪಿಸುತ್ತಿದೆ’ ಎಂದು ಟೀಕಿಸಿದ್ದಾರೆ.
‘ಸಣ್ಣ ಮತ್ತು ಮಧ್ಯಮವರ್ಗದ ಐಸ್‌ಕ್ರೀಂ ತಯಾರಕರನ್ನು ಭೇಟಿಯಾಗಿ ಚರ್ಚಿಸಿದ ನಂತರ, ಸರ್ಕಾರ ತನಗೆ ಅನುಕೂಲವಾಗಿರುವ ಕೈಗಾರಿಕೋದ್ಯಮಿಗಳ ಲಾಭಕ್ಕಾಗಿ ಸಣ್ಣ ವ್ಯವಹಾರಗಳನ್ನು ನಾಶ ಮಾಡಲು ನಿರ್ಧರಿಸಿರುವುದು ಸ್ಪಷ್ಟವಾಗಿದೆ’ ಎಂದು ಹೇಳಿದ್ದಾರೆ.
‘ಸಣ್ಣ ಐಸ್ ಕ್ರೀಮ್ ತಯಾರಕರು, ಭಾರತದ ಬಡ ಮತ್ತು ಕೆಳ ಮಧ್ಯಮ ವರ್ಗದವರಾಗಿದ್ದಾರೆ. ಇಂಥವರು ದೇಶದಾದ್ಯಂತ ಸಾವಿರಾರು ಮಂದಿ ಇದ್ದಾರೆ. ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸುತ್ತಿದ್ದಾರೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.