ADVERTISEMENT

ಜಗತ್ತು ಭಾರತದತ್ತ ವಾಲುತ್ತಿದೆ: ಮೋದಿ

ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ * ವಿರೋಧ ಪಕ್ಷದವರ ಸಭಾತ್ಯಾಗ

ಪಿಟಿಐ
Published 5 ಫೆಬ್ರುವರಿ 2026, 16:24 IST
Last Updated 5 ಫೆಬ್ರುವರಿ 2026, 16:24 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ಭಾರತವು ಜಗತ್ತಿನ ದಕ್ಷಿಣ ಭಾಗದ ಗಟ್ಟಿ ಧ್ವನಿಯಾಗಿ ಹೊರಹೊಮ್ಮಿದೆ. ಇದರ ಪರಿಣಾಮ ವಿಶ್ವವು ಭಾರತದ ಕಡೆಗೆ ವಾಲುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು. 

ರಾಷ್ಟ್ರಪತಿ ಅವರ ಭಾಷಣದ ಮೇಲಿನ ಚರ್ಚೆಗೆ ರಾಜ್ಯಸಭೆಯಲ್ಲಿ ಉತ್ತರಿಸಿದ ಅವರು, ‘ಜಗತ್ತು ದಕ್ಷಿಣದ ಬಗ್ಗೆ ಮಾತನಾಡುತ್ತಿದ್ದು, ಭಾರತವು ದಕ್ಷಿಣದ ಗಟ್ಟಿಧ್ವನಿಯಾಗಿ ಬೆಳೆದಿದೆ’ ಎಂದು ಪ್ರತಿಪಾದಿಸಿದರು. 

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರು ಈ ವೇಳೆ ಘೋಷಣೆಗಳನ್ನು ಕೂಗಿದರು. ಅದರ ನಡುವೆಯೇ ಪ್ರಧಾನಿ ಉತ್ತರ ನೀಡಲು ಆರಂಭಿಸಿದರು.  

ADVERTISEMENT

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉದ್ದೇಶಿಸಿ, ‘ನೀವು ಕುಳಿತಲ್ಲಿನಿಂದಲೇ ಘೋಷಣೆಗಳನ್ನು ಕೂಗಬಹುದು’ ಎಂದು ಮೋದಿ ಹೇಳಿದರು. ಆದರೆ ವಿರೋಧ ಪಕ್ಷದ ಸಂಸದರು ಸಭಾತ್ಯಾಗ ಮಾಡಿದರು. 

ಕೋವಿಡ್‌ ಬಳಿಕ ಜಗತ್ತು ಹೊಸ ದಿಕ್ಕಿನತ್ತ ಸಾಗುತ್ತಿದೆ. ಅದನ್ನು ಸ್ವತಂತ್ರವಾಗಿ ವಿಶ್ಲೇಷಿಸಿದರೆ, ವಿಶ್ವವು ಭಾರತದ ಕಡೆಗೆ ವಾಲುತ್ತಿದೆ ಎಂದು ಹೇಳಬಹುದು ಎಂದರು. 

ವಿವಿಧ ದೇಶಗಳ ಜತೆ ವ್ಯಾಪಾರ ಒಪ್ಪಂದಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದ ಅವರು, ‘ಕೆಲ ದಿನಗಳಲ್ಲಿ ನಾವು ಒಂಬತ್ತು ಪ್ರಮುಖ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಇದರಲ್ಲಿ ಐರೋಪ್ಯ ಒಕ್ಕೂಟದ (ಇ.ಯು) ಜತೆಗಿನ ಒಪ್ಪಂದವು ‘ಎಲ್ಲ ಒಪ್ಪಂದಗಳ ತಾಯಿ’ಯಾಗಿದೆ’ ಎಂದು ಬಣ್ಣಿಸಿದರು.   

ಭಾರತ– ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಇದರಿಂದ ಭಾರತೀಯ ಯುವ ಸಮುದಾಯಕ್ಕೆ ಹೆಚ್ಚಿನ ಪ್ರಯೋಜನ ಆಗಲಿದೆ ಎಂದು ಅವರು ಹೇಳಿದರು. 

‘ಇ.ಯು ಜತೆ ಭಾರತದ ಒಪ್ಪಂದ ಮಾಡಿಕೊಂಡಾಗ ಜಗತ್ತಿನಲ್ಲಿ ಸ್ಥಿರತೆಯ ವಿಶ್ವಾಸ ಮೂಡಿತು. ಬಳಿಕ ಭಾರತ–ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಿಂದ ವಿಶ್ವಕ್ಕೆ ಹೆಚ್ಚಿನ ವಿಶ್ವಾಸ ಮೂಡಿದೆ’ ಎಂದು ಅವರು ತಿಳಿಸಿದರು.  

ವಿರೋಧ ಪಕ್ಷಗಳ ವಿರುದ್ಧ ಟೀಕೆ: 

‘ವಿರೋಧ ಪಕ್ಷದ ಸದಸ್ಯರು ಸುಸ್ತಾಗಿ ಸಭಾತ್ಯಾಗ ಮಾಡಿದ್ದಾರೆ. ಆದರೆ ಅವರು ಇದಕ್ಕೆ ಒಂದು ದಿನ ಉತ್ತರಿಸಬೇಕಾಗುತ್ತದೆ. ಯಾವುದೇ ದೇಶಗಳು ನಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದೆ ಬಾರದ ಹಂತಕ್ಕೆ ಅವರು ಭಾರತವನ್ನು ಹೇಗೆ ತಂದರು ಎಂಬುದನ್ನು ಹೇಳಬೇಕಾಗುತ್ತದೆ’ ಎಂದರು.  

ಕಾಂಗ್ರೆಸ್‌ ನೇತೃತ್ವದಲ್ಲಿದ್ದ ಹಿಂದಿನ ಸರ್ಕಾರಗಳು ಭಾರತದ ಪ್ರತಿಷ್ಠೆಯನ್ನು ನಾಶಮಾಡಿವೆ ಎಂದೂ ದೂರಿದರು. 

ಲೋಕಸಭೆಯಲ್ಲಿ ವಿರೋಧ ಪಕ್ಷಗಳಿಂದ ಉಂಟಾದ ಅಡಚಣೆಗೆ ಬೇಸರ ವ್ಯಕ್ತಪಡಿಸಿದ ಅವರು, ಇದು ರಾಷ್ಟ್ರಪತಿ ಮತ್ತು ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ ಎಂದರು.

–––

ಪ್ರಧಾನಿ ಹೇಳಿದ್ದು... 

* ವಿರೋಧ ಪಕ್ಷದವಾದ ಕಾಂಗ್ರೆಸ್‌ಗೆ ಸತತ ಚುನಾವಣಾ ಸೋಲುಗಳನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ‘ಮೊಹಬತ್‌ ಕಿ ದುಕಾನ್‌’ ಬಗ್ಗೆ ಮಾತನಾಡುವ ಅವರು, ಮೋದಿ ಸಮಾಧಿ ಅಗೆಯುವ ಬಗ್ಗೆ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದು ಚುನಾವಣಾ ಸೋಲುಗಳಿಂದ ಅವರು ಎಷ್ಟು ಹತಾಶರಾಗಿದ್ದೀರಿ ಎಂಬುದನ್ನು ತೋರಿಸುತ್ತದೆ

* ಕೇಂದ್ರ ಸಚಿವ ರವನೀತ್‌ ಸಿಂಗ್‌ ಬಿಟ್ಟೂ ಅವರನ್ನು ರಾಹುಲ್‌ ಗಾಂಧಿಯವರು ದ್ರೋಹಿ ಎಂದು ಕರೆದಿದ್ದಾರೆ. ಇದು ಇಡೀ ಸಿಖ್‌ ಸಮುದಾಯಕ್ಕೆ ಮಾಡಿದ ಅವಮಾನ 

* ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷವು ಪಶ್ಚಿಮ ಬಂಗಾಳದಲ್ಲಿ ನುಸುಳುಕೋರರನ್ನು ರಕ್ಷಿಸುತ್ತಿದೆ. ಈ ಮೂಲಕ ದೇಶದ ಯುವ ಜನರ ಉದ್ಯೋಗದ ಹಕ್ಕುಗಳು ಮತ್ತು ಬುಡಕಟ್ಟು ಜನರ ಭೂಮಿಯನ್ನು ಕಸಿದುಕೊಳ್ಳುತ್ತಿದೆ  

* ಪ್ರಧಾನಿ ಹುದ್ದೆಯನ್ನು ಕಾಂಗ್ರೆಸ್‌ನ ಮೊದಲ ಕುಟುಂಬವು ತನ್ನ ಆಸ್ತಿ ಎಂದು ಭಾವಿಸಿತ್ತು. ಆದರೆ ಬಡ ವ್ಯಕ್ತಿಯೊಬ್ಬರು ಈ ಹುದ್ದೆ ಅಲಂಕರಿಸಿರುವುದು ಮತ್ತು ಉಳಿದಿರುವುದನ್ನು ಅವರಿಗೆ  ಸಹಿಸಿಕೊಳ್ಳಲು ಆಗುತ್ತಿಲ್ಲ

* ಕೋಟ್ಯಂತರ ತಾಯಂದಿರು, ಸಹೋದರಿಯರು ಮತ್ತು ಬಡಜನರ ಆಶೀರ್ವಾದ ಇರುವ ಕಾರಣ, ಕಾಂಗ್ರೆಸ್‌ನವರಿಗೆ ನನ್ನ ಸಮಾಧಿ ಅಗೆಯಲು ಆಗುವುದಿಲ್ಲ

* 11 ವರ್ಷಗಳಲ್ಲಿ ನನ್ನ ನೇತೃತ್ವದ ಸರ್ಕಾರ ಸಾಕಷ್ಟು ಸಾಧನೆಗಳನ್ನು ಮಾಡಿದೆ. ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಿ ದೇಶ ಬೆಳೆಯುತ್ತಿದೆ. 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶದ ಗುರಿಯನ್ನು ಸಾಧಿಸಲಿದೆ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.