ADVERTISEMENT

ಅದಾನಿ ಸಮೂಹಕ್ಕೆ ಸಂಬಂಧಿಸಿದ ಚರ್ಚೆ ತಪ್ಪಿಸಲು ಮೋದಿ ಸರ್ವ ಪ್ರಯತ್ನ: ರಾಹುಲ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 2:24 IST
Last Updated 7 ಫೆಬ್ರುವರಿ 2023, 2:24 IST
   

ನವದೆಹಲಿ: ಅದಾನಿ ಸಮೂಹಕ್ಕೆ ಸಂಬಂಧಿಸಿದ ವಿಷಯಗಳ ಚರ್ಚೆ ಸಂಸತ್ತಿನಲ್ಲಿ ನಡೆಯದಂತೆ ನೋಡಿ ಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೈಲಾಗುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಸೋಮವಾರ ಆರೋಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಕೋಟ್ಯಧಿಪತಿ ಉದ್ಯಮಿಯ ಹಿಂದೆ ಯಾವ ಶಕ್ತಿ ಇದೆ ಎಂಬುದನ್ನು ದೇಶ ತಿಳಿದುಕೊಳ್ಳಬೇಕಿದೆ’ ಎಂದು ಪ್ರತಿಪಾದಿಸಿದರು.

ಎರಡು ಮೂರು ವರ್ಷಗಳಿಂದ ಈ ವಿಷಯ ಕುರಿತು ಮಾತನಾಡುತ್ತಿದ್ದೇನೆ. ‘ನಾವಿಬ್ಬರು, ನಮಗಿಬ್ಬರು’ ಎಂಬಂತೆ ಮೋದಿ ಸರ್ಕಾರ ನಡೆಯುತ್ತಿದೆ ಎಂದ ಅವರು, ಕೈಗಾರಿಕೋದ್ಯಮಿಗಳಾದ ಗೌತಮ್‌ ಅದಾನಿ ಮತ್ತು ಮುಖೇಶ್‌ ಅಂಬಾನಿ ಹೆಸರುಗಳನ್ನು ಉಲ್ಲೇಖಿಸಿದರು. ಮೋದಿ ಸರ್ಕಾರ ಇವರಿಗೆ ಸಾಕಷ್ಟು ಲಾಭ ಮಾಡಿಕೊಟ್ಟಿದೆ ಎಂದು ದೂರಿದರು.

‘ಸಂಸತ್ತಿನಲ್ಲಿ ಅದಾನಿ ಸಮೂಹದ ಕುರಿತು ಚರ್ಚೆ ನಡೆಸಲು ಸರ್ಕಾರ ಹೆದರುತ್ತಿದೆ. ಹೀಗಾಗಿಯೇ ಸರ್ಕಾರ, ಪ್ರಮುಖವಾಗಿ ಮೋದಿ ಅವರೇ ಈ ಕುರಿತು ಚರ್ಚೆ ನಡೆಯದಂತೆ ಎಲ್ಲ
ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಕಾರಣಗಳು ಏನು ಎಂಬುದು ನಿಮಗೆಲ್ಲ ಗೊತ್ತಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಲಕ್ಷ ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ. ದೇಶದ ಮೂಲ ಸೌಕರ್ಯವನ್ನು ಸ್ವಾಧೀನ ಮಾಡಿಕೊಂಡ ಬಗ್ಗೆ ಚರ್ಚೆ ನಡೆಯಬೇಕಿದೆ. ಇದರ ಹಿಂದೆ ಯಾರ ಕೈವಾಡ ಇದೆ ಎಂಬುದು ಚರ್ಚೆಯಾಗಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.