ADVERTISEMENT

ಟಿಎಂಸಿ ನಾಯಕರ ಬಂಧಿಸಿದರೆ ಬೀದಿಗಿಳಿಯಿರಿ: ಮಮತಾ ಬ್ಯಾನರ್ಜಿ

ಮುಖಂಡರ ಪತ್ನಿಯರಿಗೆ ಬಂಗಾಳ ಸಿ.ಎಂ ಮಮತಾ ಕರೆ * ಪ್ರಧಾನಿ, ತನಿಖಾ ಸಂಸ್ಥೆಗಳ ವಿರುದ್ಧ ವಾಗ್ದಾಳಿ

ಪಿಟಿಐ
Published 8 ಏಪ್ರಿಲ್ 2024, 14:56 IST
Last Updated 8 ಏಪ್ರಿಲ್ 2024, 14:56 IST
ಎನ್‌ಐಎ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳ ಮುಖ್ಯಸ್ಥರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ಚುನಾವಣಾ ಆಯೋಗದ ಕಚೇರಿ ಎದುರು ಟಿಎಂಸಿ ನಾಯಕರಾದ ಡೆರೆಕ್ ಒಬ್ರಯಾನ್, ಡೋಲಾ ಸೇನ್, ಸಾಕೇತ್ ಗೋಖಲೆ, ಸಾಗರಿಕಾ ಘೋಷ್, ಅಬಿರ್ ರಂಜನ್‌ ಬಿಸ್ವಾಸ್‌ ಸೋಮವಾರ ಧರಣಿ ನಡೆಸಿದರು –ಪಿಟಿಐ ಚಿತ್ರ
ಎನ್‌ಐಎ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳ ಮುಖ್ಯಸ್ಥರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ಚುನಾವಣಾ ಆಯೋಗದ ಕಚೇರಿ ಎದುರು ಟಿಎಂಸಿ ನಾಯಕರಾದ ಡೆರೆಕ್ ಒಬ್ರಯಾನ್, ಡೋಲಾ ಸೇನ್, ಸಾಕೇತ್ ಗೋಖಲೆ, ಸಾಗರಿಕಾ ಘೋಷ್, ಅಬಿರ್ ರಂಜನ್‌ ಬಿಸ್ವಾಸ್‌ ಸೋಮವಾರ ಧರಣಿ ನಡೆಸಿದರು –ಪಿಟಿಐ ಚಿತ್ರ   

ಬಾಂಕುಡಾ, ಪಶ್ಚಿಮ ಬಂಗಾಳ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಪ್ರತಿಪಕ್ಷಗಳ ನಾಯಕರನ್ನು ಜೈಲಿಗೆ ಕಳುಹಿಸುವುದೇ ‘ಮೋದಿ ಕೀ ಗ್ಯಾರಂಟಿ’ ಎಂಬುದರ ಅರ್ಥ ಇರುವಂತಿದೆ‘ ಎಂದಿದ್ದಾರೆ.

ಇಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ದೇಶವನ್ನೇ ಜೈಲಾಗಿ ಪರಿವರ್ತಿಸುತ್ತಿದೆ. ಟಿಎಂಸಿ ನಾಯಕರನ್ನು ಚುನಾವಣೆಗೆ ಮುನ್ನ ಬಂಧಿಸಿದ್ದೇ ಆದಲ್ಲಿ ಅವರ ಪತ್ನಿ, ಬೆಂಬಲಿಗರು ಬೀದಿಗಿಳಿಯಬೇಕು ಎಂದು ಕರೆ ನೀಡಿದರು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾರ್ಯವೈಖರಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೇ ಎನ್‌ಐಎ ಅಧಿಕಾರಿಗಳು ಇತ್ತೀಚೆಗೆ ಪೂರ್ವ ಮೇದಿನಿಪುರ್ ಜಿಲ್ಲೆಯ ಭೂಪತಿನಗರಕ್ಕೆ ದಾಳಿಗೆ ತೆರಳಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಚುನಾವಣಾ ರ‍್ಯಾಲಿಗಳಲ್ಲಿ ಮಾತನಾಡಲು ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ. ಅದಕ್ಕೆ ನನ್ನ ತಕರಾರು ಇಲ್ಲ. ಆದರೆ, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಚುನಾವಣೆಯ ಬಳಿಕ ವಿರೋಧಪಕ್ಷಗಳ ನಾಯಕರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುತ್ತೇವೆ ಎಂಬ ಅವರ ಹೇಳಿಕೆ ಪ್ರಜಾಪ್ರಭುತ್ವದಲ್ಲಿ ಸ್ವೀಕಾರಾರ್ಹವಲ್ಲ’ ಎಂದು ಮಮತಾ ಹೇಳಿದರು.

ಭಾನುವಾರ ಜಲ್‌ಪಾಯಿಗುಡಿಯಲ್ಲಿ ರ‍್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ‘ನಾವು ಭ್ರಷ್ಟಾಚಾರ ನಿರ್ಮೂಲನೆ ಕುರಿತು ಮಾತನಾಡುತ್ತೇವೆ. ಆದರೆ, ವಿರೋಧಪಕ್ಷಗಳು ಭ್ರಷ್ಟಾಚಾರಿಗಳನ್ನು ರಕ್ಷಿಸಿ ಎನ್ನುತ್ತಿವೆ. ಜೂನ್‌ 4ರ ನಂತರ ಈ ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುತ್ತೇವೆ’ ಎಂದು ಹೇಳಿದ್ದರು.

ಈ ಹೇಳಿಕೆಯನ್ನು ಉಲ್ಲೇಖಿಸಿರುವ ಮಮತಾ ಅವರು, ’ಪ್ರಧಾನಿ ಹೀಗೆ ಮಾತನಾಡಬಹುದೇ? ಚುನಾವಣೆ ಬಳಿಕ ಬಿಜೆಪಿ ನಾಯಕರನ್ನು ಜೈಲಿಗೆ ಹಾಕುತ್ತೇನೆ ಎಂದು ನಾನು ಹೇಳಿದರೆ ಹೇಗಿರುತ್ತದೆ.?  ಪ್ರಜಾಪ್ರಭುತ್ವದಲ್ಲಿ ಇದು ಸ್ವೀಕಾರಾರ್ಹವಲ್ಲ. ನಾನು ಹಾಗೆ ಹೇಳುವುದಿಲ್ಲ‘ ಎಂದರು.

‘ನಿಮ್ಮ ಒಂದು ಜೇಬಿನಲ್ಲಿ ಇ.ಡಿ ಮತ್ತು ಸಿಬಿಐ ಇದ್ದರೆ, ಇನ್ನೊಂದರಲ್ಲಿ ಎನ್‌ಐಎ ಮತ್ತು ಆದಾಯ ತೆರಿಗೆ ಇಲಾಖೆಯೇ ಇದೆ. ಅವರು ನಿಮ್ಮ ಪಕ್ಷದ ಮೈತ್ರಿಗಳು. ಈ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಪಕ್ಷಗಳನ್ನು ಬೆದರಿಸಲಾಗುತ್ತಿದೆ. ಆದರೆ, ನಮ್ಮನ್ನು ಹೆದರಿಸಲು ಬಿಜೆಪಿಗೆ ಆಗದು’ ಎಂದು ಪ್ರತಿಪಾದಿಸಿದರು.

‘ರಾತ್ರಿಯ ವೇಳೆ ಟಿಎಂಸಿ ನಾಯಕರ ಮನೆಗಳಿಗೆ ದಾಳಿ ನಡೆಸಲಾಗುತ್ತಿದೆ ಎಂದು ಟೀಕಿಸಿದ ಅವರು, ಇನ್ನು ಮುಂದೆ ತನಿಖಾ ಸಂಸ್ಥೆಗಳು ಟಿಎಂಸಿ ನಾಯಕರನ್ನು ಬಂಧಿಸಿದರೆ, ಈ ನಾಯಕರ ಪತ್ನಿಯರು ಬೀದಿಗಿಳಿಯುತ್ತಾರೆ. ನಾವು ಈ ತನಿಖಾ ಸಂಸ್ಥೆಗಳ ಕಾರ್ಯವೈಖರಿಯಿಂದ ಭೀತಿಗೆ ಒಳಗಾಗಿಲ್ಲ’ ಎಂದು ತಿರುಗೇಟು ನೀಡಿದರು. 

ತನಿಖಾ ಸಂಸ್ಥೆಗಳ ಮುಖ್ಯಸ್ಥರ ಬದಲಾವಣೆಗೆ ಟಿಎಂಸಿ ಆಗ್ರಹ: ಇ.ಸಿ ಕಚೇರಿ ಬಳಿ ಧರಣಿ

ನವದೆಹಲಿ: ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ ಎನ್‌ಐಎ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಆದಾಯ ತೆರಿಗೆ ಇಲಾಖೆಯ ಮುಖ್ಯಸ್ಥರನ್ನು ಬದಲಾಯಿಸಬೇಕು ಎಂದು ತೃಣಮೂಲ ಕಾಂಗ್ರೆಸ್‌ ಪಕ್ಷವು (ಟಿಎಂಸಿ) ಚುನಾವಣಾ ಆಯೋಗಕ್ಕೆ ಆಗ್ರಹಿಸಿದೆ. ಈ ಕುರಿತು ಗಮನಸೆಳೆಯಲು ಇಲ್ಲಿ ಚುನಾವಣಾ ಆಯೋಗದ ಕಚೇರಿ ಎದುರು ಟಿಎಂಸಿ ಮುಖಂಡರು ಧರಣಿ ನಡೆಸಿದರು.

ಬಳಿಕ ಪಕ್ಷದ ನಿಯೋಗವು ಮುಖ್ಯ ಚುನಾವಣಾ ಆಯುಕ್ತರ ನೇತೃತ್ವದ ಪೂರ್ಣಪೀಠವನ್ನು ಭೇಟಿಯಾಗಿ ಚರ್ಚಿಸಿತು.  ಟಿಎಂಸಿ ನಾಯಕರೂ ಆದ ಡೆರೆಕ್‌ ಒಬ್ರಯಾನ್ ಡೋಲಾ ಸೇನ್‌ ಸಾಕೇತ್‌ ಗೋಖಲೆ ಸಾಗರಿಕಾ ಘೋಷ್ ಅವರು ಈ ನಿಯೋಗದಲ್ಲಿದ್ದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಿತಾಸಕ್ತಿಗೆ ಅನುಗುಣವಾಗಿಪ್ರತಿಪಕ್ಷಗಳ ನಾಯಕರನ್ನೇ ಗುರಿಯಾಗಿಸಿ ಈ ತನಿಖಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಟಿಎಂಸಿ ಆರೋಪಿಸಿದೆ. 

‘ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಎನ್‌ಐಎ ಇ.ಡಿ ಸೇರಿದಂತೆ ತನಿಖಾ ಸಂಸ್ಥೆಗಳ ಕಾರ್ಯವೈಖರಿಯು ನಾಚಿಕೆಗೇಡಿತನದು. ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೂ ಸಮಬಲದ ಹೋರಾಟದ ಅವಕಾಶ ಇರುವಂತೆ ನೋಡಿಕೊಳ್ಳಬೇಕು ಎಂದು ಆಯೋಗಕ್ಕೆ ಕೋರಿದ್ದೇವೆ’ ಎಂದು ಭೇಟಿ ಬಳಿಕ ಡೋಲಾ ಸೇನ್‌ ಸುದ್ದಿಗಾರರಿಗೆ ತಿಳಿಸಿದರು.

ಟಿಎಂಸಿ ಮುಖಂಡರ ಬಂಧನ

ಚುನಾವಣಾ ಆಯೋಗದ ಕಚೇರಿ ಎದುರು ಧರಣಿ ನಡೆಸುತ್ತಿದ್ದ ಟಿಎಂಸಿ ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು. ಆಯೋಗದ ಪೂರ್ಣಪೀಠವನ್ನು ಭೇಟಿಯಾದ ಬಳಿಕ 10 ಸದಸ್ಯರಿದ್ದ ಟಿಎಂಸಿ ನಿಯೋಗವು ಆಯೋಗದ ಕಚೇರಿ ಎದುರು 24 ಗಂಟೆ ಧರಣಿ ನಡೆಸಲಾಗುವುದು ಎಂದು ಪ್ರಕಟಿಸಿದ್ದರು. ಟಿಎಂಸಿ ಸಂಸದ ಮೊಹಮ್ಮದ್ ನಾದಿಮಲ್‌ ಹಕ್ ಶಾಸಕರಾದ ವಿವೇಕ್‌ ಗುಪ್ತಾ ಮಾಜಿ ಸಂಸದರಾದ ಅರ್ಪಿತಾ ಘೋಷ್ ಶಂತನು ಸೇನ್ ಅಬಿರ್‌ ರಂಜನ್ ಬಿಸ್ವಾಸ್ ಟಿಎಂಸಿ ವಿದ್ಯಾರ್ಥಿ ಘಟಕದ ಉಪಾಧ್ಯಕ್ಷ ಸುದೀಪ್‌ ರಾಹ  ಅವರನ್ನು ವಶಕ್ಕೆ ಪಡೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.