ಜಯರಾಜ್ ರಾಜಾ ರಾವ್ ಅವರನ್ನು ಭೇಟಿಯಾದ ಮೋದಿ
ಚಿತ್ರ; ಎಕ್ಸ್
ಕ್ವಾಲಾಲಂಪುರ: ಮಲೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿರುವ ಭಾರತೀಯ ರಾಷ್ಟ್ರೀಯ ಸೇನೆಯ (ಆಜಾದ್ ಹಿಂದ್ ಫೌಜ್) ನಿವೃತ್ತ ಯೋಧ ಜಯರಾಜ್ ರಾಜಾ ರಾವ್ ಅವರನ್ನು ಭೇಟಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅವರು, ಐಎನ್ಎಯ ಅಸಾಧಾರಣ ಧೈರ್ಯ, ಪರಂಪರೆ ಮತ್ತು ತ್ಯಾಗಕ್ಕಾಗಿ ಎಲ್ಲಾ ಭಾರತೀಯರ ಪರವಾಗಿ ಕೃತಜ್ಞತೆ ತಿಳಿಸಿದ್ದಾರೆ.
‘ಭಾರತದ ಭವಿಷ್ಯ ರೂಪಿಸಲು ಸಹಾಯ ಮಾಡಿದ ಐಎನ್‌ಎಯ ಧೈರ್ಯಶಾಲಿ ಮಹಿಳೆಯರು, ಪುರುಷರು ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ನಾವು ಎಂದೆಂದಿಗೂ ಋಣಿಯಾಗಿರುತ್ತೇವೆ’ ಎಂದು ಪ್ರಧಾನಿ ಮೋದಿಯವರು ಸಭೆಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಐಎನ್ಎ ಅನುಭವಿ ರಾವ್ ಅವರನ್ನು ಭೇಟಿಯಾಗಿರುವುದು ತುಂಬಾ ವಿಶೇಷ ಎಂದು ಮೋದಿ ತಿಳಿಸಿದ್ದಾರೆ.
‘ಅವರ ಜೀವನವು ಅಪಾರ ಧೈರ್ಯ ಮತ್ತು ತ್ಯಾಗದಿಂದ ಗುರುತಿಸಲ್ಪಟ್ಟಿದೆ. ಅವರ ಅನುಭವಗಳನ್ನು ಕೇಳುವುದು ತುಂಬಾ ಸ್ಪೂರ್ತಿದಾಯಕವಾಗಿತ್ತು’ ಎಂದು ಅವರು ಹೇಳಿದರು.
‘ಐಎನ್‌ಎಯ ಅಸಾಧಾರಣ ಧೈರ್ಯ, ಪರಂಪರೆ ಮತ್ತು ತ್ಯಾಗಕ್ಕಾಗಿ ಪ್ರಧಾನಿ ಮೋದಿ ಎಲ್ಲಾ ಭಾರತೀಯರ ಪರವಾಗಿ ಕೃತಜ್ಞತೆಗಳನ್ನು ತಿಳಿಸಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
1943ರ ಸೆಪ್ಟೆಂಬರ್‌ನಲ್ಲಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ತಮ್ಮ ಸಾವಿರಾರು ಅನುಯಾಯಿಗಳನ್ನು ಉದ್ದೇಶಿಸಿ ಮಾಡಿದ ಉತ್ಸಾಹಭರಿತ ಭಾಷಣದಲ್ಲಿ ಕೌಲಾಲಂಪುರದ ಸೆಲಂಗೋರ್ ಪದಂಗ್ (ದತಾರನ್ ಮೆರ್ಡೆಕಾ ಅಥವಾ ಸ್ವಾತಂತ್ರ್ಯ ಚೌಕ) ದಿಂದ ಹಲವಾರು ಯುವಕರನ್ನು ಭಾರತೀಯ ಸ್ವಾತಂತ್ರ್ಯದ ಹೋರಾಟಕ್ಕೆ ಸೇರಲು ಪ್ರೇರೇಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.