ADVERTISEMENT

Raksha Bandhan: ಈ ಬಾರಿಯೂ ಪ್ರಧಾನಿ ಮೋದಿಗೆ ರಾಖಿ ಕಟ್ಟಲಿರುವ ಪಾಕ್‌ ಸಹೋದರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2023, 5:09 IST
Last Updated 22 ಆಗಸ್ಟ್ 2023, 5:09 IST
ಖಮರ್ ಮೊಹ್ಸಿನ್ ಶೇಖ್
ಖಮರ್ ಮೊಹ್ಸಿನ್ ಶೇಖ್    

ನವದೆಹಲಿ: ಪ್ರತಿವರ್ಷದಂತೆ ಈ ಬಾರಿಯೂ ರಕ್ಷಾ ಬಂಧನಕ್ಕೆ ಪ್ರಧಾನಿ ಮೋದಿಯವರಿಗೆ ಪಾಕಿಸ್ತಾನ ಸಹೋದರಿ ಖಮರ್ ಮೊಹ್ಸಿನ್ ಶೇಖ್ ದೆಹಲಿಗೆ ಆಗಮಿಸಿ ರಾಖಿ ಕಟ್ಟಲಿದ್ದಾರೆ.

‘ಕೋವಿಡ್‌ ಕಾರಣದಿಂದ ಕಳೆದ 2–3 ವರ್ಷಗಳಿಂದ ಮೋದಿ ಅವರನ್ನು ಭೇಟಿಯಾಗಿ ರಾಖಿ ಕಟ್ಟಲು ಸಾಧ್ಯವಾಗಲಿಲ್ಲ. ಈ ವರ್ಷ ನಾನು ನನ್ನ ಕೈಯಾರೆ ತಯಾರಿಸಿದ ರಾಖಿ ಹಾಗೂ ಕೃಷಿ ಸಂಬಂಧಿ ಪುಸ್ತಕದೊಂದಿಗೆ ದೆಹಲಿಗೆ ತೆರಳಲಿದ್ದೇನೆ’ ಎಂದು ಖಮರ್‌ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದ್ದಾರೆ.

‘ನಾನು ಅವರಿಗೆ ವಿಶೇಷವಾಗಿ ಕೆಂಪು ಬಣ್ಣದ ರಾಖಿ ಮಾಡಿದ್ದೇನೆ. ಕೆಂಪು ಬಣ್ಣವನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮೊದಲು, ನಾನು ಅವರನ್ನು ಗುಜರಾತ್‌ನ ಮುಖ್ಯಮಂತ್ರಿಯಾಗಬೇಕೆಂದು ಪ್ರಾರ್ಥಿಸಿದ್ದೆ, ಅದು ನೆರವೇರಿದೆ. ಬಳಿಕ ನಾನು ರಾಖಿ ಕಟ್ಟಿದಾಗಲೆಲ್ಲ ಅವರು ಪ್ರಧಾನಿಯಾಗಬೇಕು ಎಂಬ ನನ್ನ ಆಸೆಯನ್ನು ವ್ಯಕ್ತಪಡಿಸುತ್ತಿದ್ದೆ. ಅವರ ಪ್ರತಿಕ್ರಿಯೆ ಯಾವಾಗಲೂ ಸಕಾರಾತ್ಮಕವಾಗಿತ್ತು, ನಿಮ್ಮ ಎಲ್ಲಾ ಆಸೆಗಳನ್ನು ದೇವರು ಪೂರೈಸುತ್ತಾನೆ ಎನ್ನುತ್ತಿದ್ದರು ಈಗ ಪ್ರಧಾನಿಯಾಗಿ ಭಾರತದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದು ಖಮರ್‌ ಹರ್ಷ ವ್ಯಕ್ತಪಡಿಸಿದ್ದಾರೆ.

ADVERTISEMENT

ಖಮರ್‌ ಅವರು ಮದುವೆಯಾದ ಮೇಲೆ ಭಾರತದಿಂದ ಪಾಕಿಸ್ತಾನಕ್ಕೆ ತೆರಳಿ ವಾಸವಿದ್ದಾರೆ.

ಕಳೆದ 30 ವರ್ಷಗಳಿಂದ ಪ್ರಧಾನಿ ಮೋದಿ ಅವರಿಗೆ ಖಮರ್‌ ಅವರು ರಾಖಿ ಕಟ್ಟುತ್ತಿದ್ದಾರೆ ಎಂದು ಎಎನ್‌ಐ ವರದಿ ತಿಳಿಸಿದೆ.

ರಾಖಿ ಹಬ್ಬ ಸಹೋದರ ಸಹೋದರಿಯರ ಹಬ್ಬವಾಗಿದೆ. ಸಹೋದರರ ಕೈಗಳಿಗೆ ರಾಖಿ ಕಟ್ಟಿ ಸಹೋದರಿಯರು ಶುಭ ಹಾರೈಸುತ್ತಾರೆ. ಈ ಬಾರಿ ಆಗಸ್ಟ್‌ 30ರಂದು ಹಬ್ಬವನ್ನು ಆಚರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.