ADVERTISEMENT

ತೆಲಂಗಾಣ | ಬಿಆರ್‌ಎಸ್‌, ಕಾಂಗ್ರೆಸ್‌ನಿಂದ ಲೂಟಿ: ಪ್ರಧಾನಿ ಮೋದಿ ಟೀಕೆ

ಪಿಟಿಐ
Published 4 ಮಾರ್ಚ್ 2024, 15:47 IST
Last Updated 4 ಮಾರ್ಚ್ 2024, 15:47 IST
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾತುಕತೆ ನಡೆಸಿದರು –ಪಿಟಿಐ ಚಿತ್ರ
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾತುಕತೆ ನಡೆಸಿದರು –ಪಿಟಿಐ ಚಿತ್ರ   

ಹೈದರಾಬಾದ್: ಕಾಂಗ್ರೆಸ್‌ ಮತ್ತು ಬಿಆರ್‌ಎಸ್‌ ಪಕ್ಷಗಳು ‘ಲೂಟಿ ಮಾಡುವ’ ಇತಿಹಾಸವನ್ನಷ್ಟೇ ಹೊಂದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.

ಅದಿಲಾಬಾದ್‌ನಲ್ಲಿ ಸೋಮವಾರ ಪಕ್ಷದ ಬೃಹತ್‌ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಇವೆರಡು ಪಕ್ಷಗಳಿಗೆ ವಿಭಿನ್ನ ಮುಖಗಳಿರಬಹುದು. ಆದರೆ ‘ಸುಳ್ಳು ಮತ್ತು ಲೂಟಿ’ ಈ ಪಕ್ಷಗಳ ಸಾಮಾನ್ಯ ಗುಣಗಳು’ ಎಂದು ವಾಗ್ದಾಳಿ ನಡೆಸಿದರು.

‘ತೆಲಂಗಾಣದಲ್ಲಿ ಬಿಆರ್‌ಎಸ್‌ ಅಧಿಕಾರದಲ್ಲಿದ್ದಾಗ ಕಾಳೇಶ್ವರಂ ಹಗರಣ ನಡೆಯಿತು. ಕಾಂಗ್ರೆಸ್‌ ಪಕ್ಷ, ಆ ಹಗರಣದ ತನಿಖೆ ನಡೆಸುವ ಬದಲು ಕಡತಗಳನ್ನು ಮುಚ್ಚಿಟ್ಟುಕೊಂಡು ಕುಳಿತಿದೆ. ನೀವು (ಬಿಆರ್‌ಎಸ್‌) ಲೂಟಿ ಮಾಡಿರುವುದರಿಂದ ನಾವೂ (ಕಾಂಗ್ರೆಸ್‌) ಲೂಟಿ ಮಾಡುತ್ತೇವೆ ಎಂಬುದು ಕಾಂಗ್ರೆಸ್‌ನ ಧೋರಣೆ’ ಎಂದು ಟೀಕಿಸಿದರು.

ADVERTISEMENT

ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆ ಸಮೀಪಿಸುತ್ತಿರುವಂತೆಯೇ ವಿವಿಧ ರಾಜ್ಯಗಳಿಗೆ ಭೇಟಿ ನೀಡಲು ನಿರ್ಧರಿಸಿರುವ ಮೋದಿ ಅವರು, ತೆಲಂಗಾಣ ಭೇಟಿ ಮೂಲಕ ಪ್ರವಾಸಕ್ಕೆ ಚಾಲನೆ ನೀಡಿದರು. ಅದಿಲಾಬಾದ್‌ನಲ್ಲಿ ಆಯೋಜಿಸಿದ್ದ ಎರಡು ಸಭೆಗಳಲ್ಲಿ ಪಾಲ್ಗೊಂಡರು. 

ಶಂಕುಸ್ಥಾಪನೆ: ಪ್ರಧಾನಿ ಅವರು ರಸ್ತೆ, ರೈಲು ಮತ್ತು ವಿದ್ಯುತ್‌ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತೆಲಂಗಾಣದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಸುಮಾರು ₹ 56 ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು.

‘ತೆಲಂಗಾಣ ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮ ಸರ್ಕಾರ ಜತೆಯಾಗಿ 10 ವರ್ಷಗಳನ್ನು ಪೂರೈಸುತ್ತಿದೆ. ತೆಲಂಗಾಣದ ಜನರ ಕನಸುಗಳನ್ನು ನನಸಾಗಿಸಲು ನಮ್ಮಿಂದ (ಕೇಂದ್ರ) ಸಾಧ್ಯವಿರುವ ಎಲ್ಲ ನೆರವನ್ನೂ ನೀಡುತ್ತಿದ್ದೇವೆ’ ಎಂದು ಪ್ರಧಾನಿ ತಿಳಿಸಿದರು.

ಭ್ರಷ್ಟಾಚಾರ ಸ್ವಜನಪಕ್ಷಪಾತ ಮತ್ತು ಓಲೈಕೆ ರಾಜಕಾರಣದಲ್ಲಿ ಮುಳುಗಿರುವ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಆತಂಕಕ್ಕೆ ಒಳಗಾಗಿದ್ದಾರೆ
ನರೇಂದ್ರ ಮೋದಿ ಪ್ರಧಾನಿ
ಕೇಂದ್ರದ ಜತೆ ತಿಕ್ಕಾಟ ಇಲ್ಲ: ರೇವಂತ್ ರೆಡ್ಡಿ
‘ಕೇಂದ್ರ ಸರ್ಕಾರವನ್ನು ಎದುರು ಹಾಕಿಕೊಳ್ಳುವ ಯಾವುದೇ ಉದ್ದೇಶ ನಮ್ಮ ಸರ್ಕಾರಕ್ಕೆ ಇಲ್ಲ’ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದರು. ರಾಜ್ಯ ವಿಭಜನೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಮುಸಿ ನದಿ ದಡದ ಪ್ರದೇಶಗಳ ಅಭಿವೃದ್ಧಿ ಹಾಗೂ ಸೆಮಿಕಂಡಕ್ಟರ್‌ ಉದ್ಯಮದ ಬೆಳವಣಿಗೆಗೆ ಕೇಂದ್ರ ಸರ್ಕಾರದ ನೆರವನ್ನು ಅವರು ಕೋರಿದರು. ಗುಜರಾತ್‌ನಂತೆ ತೆಲಂಗಾಣ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒತ್ತು ನೀಡಬೇಕು ಎಂದೂ ಮನವಿ ಮಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.