
ಕಿರಣ್ ರಿಜಿಜು
ಪಟ್ನಾ: ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೂ ಮುನ್ನ 40ರಿಂದ 50 ಮಂದಿ ವಿರೋಧ ಪಕ್ಷದ ಸಂಸದರು ಸ್ಪೀಕರ್ ಓಂ ಬಿರ್ಲಾ ಅವರ ಕೊಠಡಿಗೆ ನುಗ್ಗಿ ಅಸಭ್ಯ ರೀತಿಯಲ್ಲಿ ಮಾತನಾಡಿದರು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಿಜಿಜು, ಬಿರ್ಲಾ ಅವರ ಕೊಠಡಿಯಲ್ಲಿ ಗದ್ದಲ ಸೃಷ್ಟಿಯಾದಾಗ ನಾನು ಅಲ್ಲಿಯೇ ಇದ್ದೆ. ಹೀಗಾಗಿಯೇ ಪ್ರಧಾನಿ ಮೋದಿ ಸದನಕ್ಕೆ ಬಾರದೇ ಇರುವುದು ಉತ್ತಮ ಎಂಬ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಬೇಕಿತ್ತು.
ವಿರೋಧ ಪಕ್ಷದವರು ತೊಂದರೆ ಸೃಷ್ಟಿಸಲು ಹವಣಿಸುತ್ತಿದ್ದರು. ಇದನ್ನು ಅರಿತು ಪ್ರಧಾನಿ ಮೋದಿ ದೂರವಿದ್ದರೆ ಉತ್ತಮ ಎನಿಸಿತು. ಹೀಗಾಗಿ ಪ್ರಧಾನಿ ಮೋದಿ ಭಾಷಣವನ್ನು ರದ್ದುಗೊಳಿಸಲಾಯಿತು ಎಂದು ರಿಜಿಜು ತಿಳಿಸಿದ್ದಾರೆ.
'ನಾವು ಅಧಿಕಾರದಲ್ಲಿದ್ದೇವೆ. ಮಾರ್ಷಲ್‌ಗಳನ್ನು ಬಳಸಿಕೊಂಡು ನಾವು ಕಲಾಪವನ್ನು ನಿಭಾಯಿಸಬಹುದಿತ್ತು. ಆದರೆ ಹಾಗೆ ಮಾಡಲು ಬಯಸಲಿಲ್ಲ. ಸಮಸ್ಯೆಯಿಂದ ಹೊರಬರಲು ನಾವು ಒಂದು ಮಾರ್ಗವನ್ನು ಕಂಡುಕೊಂಡೆವು' ಎಂದು ರಿಜಿಜು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.