ಅಹಮದಾಬಾದ್: ‘ರೈತರು, ಹೈನುಗಾರರು, ಸಣ್ಣ ಕೈಗಾರಿಕಾ ಉದ್ಯಮಿಗಳ ಹಿತಾಸಕ್ತಿ ರಕ್ಷಿಸುವುದರಲ್ಲಿ ರಾಜಿಯಾಗುವುದಿಲ್ಲ. ಒತ್ತಡ ಹೆಚ್ಚಾಗಬಹುದು, ಎಲ್ಲವನ್ನೂ ಸಹಿಸಿಕೊಳ್ಳುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಭಾರತದಿಂದ ರಫ್ತು ಮಾಡುವ ಉತ್ಪನ್ನಗಳಿಗೆ ಅಮೆರಿಕವು ಶೇಕಡಾ 50ರಷ್ಟು ಸುಂಕ ವಿಧಿಸುವ ಗಡುವಿಗೆ ಎರಡು ದಿನಗಳು ಬಾಕಿ ಉಳಿದಿರುವಂತೆಯೇ ಅವರು ಈ ಹೇಳಿಕೆ ನೀಡಿದ್ದಾರೆ.
ಅಹಮದಾಬಾದ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸೋಮವಾರ ಚಾಲನೆ ನೀಡಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
‘ದೇಶವನ್ನು 60ರಿಂದ 65 ವರ್ಷಗಳ ಕಾಲ ಆಳಿದ ಪಕ್ಷವು ‘ಆಮದು ಹಗರಣ’ದಲ್ಲಿ ಭಾಗಿಯಾಗಿ ಇಡೀ ದೇಶವನ್ನು ಇನ್ನೊಂದು ದೇಶದ ಮೇಲೆ ಅವಲಂಬಿತರಾಗುವಂತೆ ಮಾಡಿತ್ತು. ಶಕ್ತಿ ಹಾಗೂ ರಕ್ಷಣೆಯ ಪ್ರತೀಕವಾದ ಸುದರ್ಶನ ಚಕ್ರಧಾರಿ ಶ್ರೀ ಕೃಷ್ಣ ಹಾಗೂ ಚರಕ ಹಿಡಿದಿದ್ದ ಮಹಾತ್ಮ ಗಾಂಧಿ ಮಾರ್ಗದಲ್ಲಿ ಸಾಗುವ ಮೂಲಕ ದೇಶವು ಸಶಕ್ತೀಕರಣದ ಹಾದಿಯಲ್ಲಿ ನಡೆಯುತ್ತಿದೆ’ ಎಂದು ಅವರು ತಿಳಿಸಿದರು.
‘ರೈತರು, ಹೈನುಗಾರರು ಹಾಗೂ ಸಣ್ಣ ಕೈಗಾರಿಕೆ ಉದ್ಯಮಿಗಳ ಹಿತ ಕಾಪಾಡುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ಎಲ್ಲವನ್ನೂ ಸಹಿಸಿಕೊಳ್ಳುತ್ತೇವೆ. ಎಷ್ಟೇ ಒತ್ತಡ ಬಂದರೂ ಅದರಿಂದ ಹೊರಬರುವ ದಾರಿಯನ್ನು ಕಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತೇವೆ. ಆತ್ಮನಿರ್ಭರ ಭಾರತ ಅಭಿಯಾನವು ಕಳೆದ ಎರಡು ದಶಕಗಳಿಂದ ತೀವ್ರಗೊಂಡಿದ್ದು, ಗುಜರಾತ್‌ನ ಮಾದರಿಯಿಂದ ಸ್ಫೂರ್ತಿ ಪಡೆಯುತ್ತಿದೆ’ ಎಂದು ಹೇಳಿದರು.
‘ಎಲ್ಲರೂಸ್ವದೇಶಿ ವಸ್ತುಗಳ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು. ಉದ್ಯಮಗಳು ಸ್ವದೇಶಿ ವಸ್ತುಗಳನ್ನೇ ಮಾರಾಟ ಮಾಡಲು ಆದ್ಯತೆ ನೀಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.