ADVERTISEMENT

ಸಿಖ್‌ ನರಮೇಧ ಕುರಿತು ಪಿತ್ರೋಡಾ ಹೇಳಿಕೆಯೇ ಮೋದಿ ಟೀಕಾಸ್ತ್ರ

ಮೋದಿ ಸರ್ಕಾರದಿಂದ ಆರೋಪಿಗಳಿಗೆ ಶಿಕ್ಷೆ: ಅಮಿತ್‌ ಶಾ

​ಪ್ರಜಾವಾಣಿ ವಾರ್ತೆ
Published 11 ಮೇ 2019, 17:29 IST
Last Updated 11 ಮೇ 2019, 17:29 IST
   

ಲಖನೌ: ಕಾಂಗ್ರೆಸ್‌ ಮತ್ತು ವಿರೋಧಪಕ್ಷಗಳ ವಿರುದ್ಧದ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರವೂ ಕಾಂಗ್ರೆಸ್‌ ನಾಯಕ ಸ್ಯಾಮ್‌ ಪಿತ್ರೋಡಾ ಅವರ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡರು.

ಸಿಖ್‌ ನರಮೇಧ ಕುರಿತು ಪಿತ್ರೋಡಾ ಅವರ ‘ಆಗಿದ್ದು ಆಗಿಹೋಯಿತು’ ಎಂದು ಹೇಳಿದ್ದನ್ನು ಚುನಾವಣಾ ಪ್ರಚಾರ ಭಾಷಣದಲ್ಲಿ ಉಲ್ಲೇಖಿಸಿ, ಕಾಂಗ್ರೆಸ್‌ ಪಕ್ಷವನ್ನು ಮೋದಿ ತೀವ್ರವಾಗಿ ಟೀಕಿಸಿದರು. ಅಲ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಸಹ ಟೀಕೆಗೆ ಬಳಸಿಕೊಂಡರು.

‘ಪಿತ್ರೋಡಾ ಅವರ ಹೇಳಿಕೆ, ದೇಶದ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್‌ನ ಮನಸ್ಥಿತಿಯ ಪ್ರತೀಕ. ತನ್ನದೇ ಪಕ್ಷದ ಸರ್ಕಾರವಿದ್ದರೂ, ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಆ ಪಕ್ಷ ಬಿಡುವುದಿಲ್ಲ’ ಎಂದು ಹರಿಹಾಯ್ದರು.

ADVERTISEMENT

ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿದ ಅವರು, ‘ಚುನಾವಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಭೀತಿಯಿಂದ ರಾಜಸ್ಥಾನ ಸರ್ಕಾರವು ತರಾತುರಿಯಲ್ಲಿ ಆ ಪ್ರಕರಣವನ್ನು ಮುಚ್ಚಿಹಾಕುತ್ತಿದೆ. ಆ ಸರ್ಕಾರ ಎಷ್ಟು ಸಂವೇದನಾ ಶೂನ್ಯವಾಗಿದೆ ಎಂಬುದಕ್ಕೆ ಇದು ಸಾಕ್ಷಿ. ಅತ್ಯಾಚಾರ ಸಂತ್ರಸ್ತೆಯ ನೋವಿಗಿಂದಲೂ ಮತ ರಾಜಕಾರಣ ದೊಡ್ಡದಾಗಬಾರದು’ ಎಂದರು.

‘ಪ್ರತಿಪಕ್ಷ ನಾಯಕರು ನನ್ನ ಜಾತಿಯನ್ನು ಉಲ್ಲೇಖಿಸಿ ಟೀಕಿಸುತ್ತಿದ್ದಾರೆ. ನಾನು ‘ಬಡವರ ಜಾತಿ’ಗೆ ಸೇರಿದವನು ಎಂಬುದನ್ನು ಅವರಿಗೆ ತಿಳಿಸಲು ಬಯಸುತ್ತೇನೆ. ಸುದೀರ್ಘ ಕಾಲ ಮುಖ್ಯಮಂತ್ರಿ ಮತ್ತು ಐದು ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಬಳಿಕವೂ ನನ್ನ ರಾಜಕೀಯ ವಿರೋಧಿಗಳಂತೆ ನಾನು ಆಸ್ತಿ ಪಾಸ್ತಿ ಸಂಪಾದಿಸಿಲ್ಲ’ ಎಂದು ಮೋದಿ ಕುಟುಕಿದರು.

ಆರೋಪಿಗಳಿಗೆ ಶಿಕ್ಷೆ, ನೊಂದವರಿಗೆ ಪರಿಹಾರ:ಸಿಖ್‌ ನರಮೇಧದ ಆರೋಪಿಗಳಿಗೆ ಮೋದಿ ಸರ್ಕಾರವು ತಕ್ಕ ಶಿಕ್ಷೆ ಕೊಡಿಸಿ, ನೊಂದವರಿಗೆ ಪರಿಹಾರ ಕಲ್ಪಿಸಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದದರು. ಚುನಾವಣಾ ರ್‍ಯಾಲಿಯೊಂದರಲ್ಲಿ‌ ಸ್ಯಾಮ್‌ ಪಿತ್ರೋಡಾ ಹೆಳಿಕೆಯನ್ನು ಉಲ್ಲೇಖಿಸಿ ಅವರು ಈ ಮಾತನ್ನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.