ನರೇಂದ್ರ ಮೋದಿ
ಪಿಟಿಐ ಚಿತ್ರ
ನವದೆಹಲಿ: ‘ವಿಕಸಿತ ಭಾರತ ಯುವ ನಾಯಕರ ಸಂವಾದ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಯುವ ಜನರೊಂದಿಗೆ ಸೋಮವಾರ ಸಂವಾದ ನಡೆಸಲಿದ್ದಾರೆ.
ಸ್ವಾಮಿ ವಿವೇಕಾನಂದ ಅವರ ಜನ್ಮ ದಿನೋತ್ಸವದ ಸ್ಮರಣಾರ್ಥವಾಗಿ ನಡೆಯುವ ‘ರಾಷ್ಟ್ರೀಯ ಯುವ ದಿನಾಚರಣೆ’ಯಂದೇ ದೆಹಲಿಯ ಭಾರತ ಮಂಟಪದಲ್ಲಿ ‘ವಿಕಸಿತ ಭಾರತ ಯುವ ನಾಯಕರ ಸಂವಾದ’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಮಾರೋಪದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.
ಈ ಕಾರ್ಯಕ್ರಮಕ್ಕೆ ಆಯ್ಕೆಯಾದವರು ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದ 10 ವಿಷಯಗಳ ಕುರಿತು ಯುವ ಜನರ ದೃಷ್ಟಿಕೋನವನ್ನು ಪ್ರಧಾನಿ ಮೋದಿ ಅವರ ಮುಂದೆ ಪ್ರಸ್ತುತಪಡಿಸಲಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ಅವರು, ಭಾರತದ ಅಭಿವೃದ್ಧಿ ಆದ್ಯತೆಗಳು ಮತ್ತು ದೀರ್ಘಕಾಲೀನ ರಾಷ್ಟ್ರ ನಿರ್ಮಾಣದ ಗುರಿಗಳ ಕುರಿತು ಆಯ್ದ ಪ್ರಬಂಧಗಳನ್ನು ಒಳಗೊಂಡ ‘ವಿಕಸಿತ ಭಾರತ ಯುವ ನಾಯಕರ ಸಂವಾದ 2026’ರ ಸಂಕಲನವನ್ನು ಬಿಡುಗಡೆ ಮಾಡಲಿದ್ದಾರೆ.
ಜನವರಿ 9ರಿಂದ 12ರವರೆಗೆ ನಡೆಯುತ್ತಿರುವ ಈ ಸಂವಾದದಲ್ಲಿ ದೇಶದಾದ್ಯಂತ ವಿವಿಧ ಹಂತಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಯುವಜನತೆ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.