ADVERTISEMENT

ಧರ್ಮದ ಮಾರ್ಗದರ್ಶನ ಇರುವವರೆಗೂ ಭಾರತ ವಿಶ್ವಗುರು–ಮೋಹನ್‌ ಭಾಗವತ್

ಪಿಟಿಐ
Published 18 ಜನವರಿ 2026, 16:12 IST
Last Updated 18 ಜನವರಿ 2026, 16:12 IST
ಮೋಹನ್‌ ಭಾಗವತ್
ಮೋಹನ್‌ ಭಾಗವತ್   

ಮುಂಬೈ: ‘ಭಾರತಕ್ಕೆ ಎಲ್ಲಿಯವರೆಗೂ ಧರ್ಮದ ಮಾರ್ಗದರ್ಶನ ದೊರೆಯುತ್ತದೆಯೋ ಅಲ್ಲಿಯವರೆಗೂ ದೇಶವು ವಿಶ್ವಗುರುವಾಗಿ ಉಳಿಯಲಿದೆ. ಇಂತಹ ಅದ್ಯಾತ್ಮಿಕ ಜ್ಞಾನವನ್ನು ವಿಶ್ವದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್‌ ಭಾಗವತ್‌ ಅಭಿಪ್ರಾಯಪಟ್ಟಿದ್ದಾರೆ.

‘ಇಡೀ ವಿಶ್ವಕ್ಕೆ ಧರ್ಮವು ಚಾಲಕನಂತಿದೆ. ಆ ತತ್ತ್ವದ ಆಧಾರದ ಮೇಲೆಯೇ ಎಲ್ಲವೂ ಸಾಗುತ್ತಿದೆ. ಭಾರತವನ್ನು ಈ ಧರ್ಮ ಮುನ್ನಡೆಸುವವರೆಗೂ ವಿಶ್ವಗುರುವಾಗಿ ಉಳಿಯಲಿದೆ. ಅಧ್ಯಾತ್ಮವು ಪೂರ್ವಿಕರಿಂದ ನಮಗೆ ಬಂದಿರುವ ಪರಂಪರೆಯಾಗಿದೆ.ವಿಶ್ವಕ್ಕೆ ಅಧ್ಯಾತ್ಮದ ಕೊರತೆ ಇದೆ’ ಎಂದು ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದರು.

‘ಪ್ರಧಾನಿ ಮೋದಿ, ನಾನು ಅಥವಾ ನೀವು ಯಾರೇ ಆಗಲಿ, ಎಲ್ಲರನ್ನೂ ಒಂದು ಶಕ್ತಿ ಮುನ್ನಡೆಸುತ್ತಿದೆ. ಆ ಚಾಲಕ ಶಕ್ತಿ ಇರುವುದರಿಂದಲೇ ಎಲ್ಲಿಯೂ ಅಪಘಾತ ಆಗುತ್ತಿಲ್ಲ. ಧರ್ಮವೇ ಆ ಚಾಲಕ ಶಕ್ತಿ’ ಎಂದು ಅವರು ಹೇಳಿದರು.

ADVERTISEMENT

‘ಧರ್ಮವು ಧಾರ್ಮಿಕತೆಯ ಮಿತಿಯೊಳಗಿಲ್ಲ. ನಿಸರ್ಗದಲ್ಲಿರುವ ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಮೂಲ ಕರ್ತವ್ಯ ಮತ್ತು ಶಿಸ್ತು ಇದೆ. ಒಂದು ದೇಶ ಜಾತ್ಯತೀತ ಇರಬಹುದು. ಆದರೆ ಯಾವುದೇ ಮಾನವ ಅಥವಾ ಸೃಷ್ಟಿಯು ಧರ್ಮದ ಹೊರತಾಗಿಲ್ಲ’ ಎಂದರು.

‘ನೀರಿಗೆ ಹರಿಯುವ ಧರ್ಮ, ಬೆಂಕಿಗೆ ಉರಿಯುವ ಧರ್ಮ. ಮಗನ ಕರ್ತವ್ಯ, ಆಳುವವನ ಕರ್ತವ್ಯ ಇದೆ. ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅಧ್ಯಾತ್ಮಿಕ ಸಂಶೋಧನೆ ಮೂಲಕ ಈ ತತ್ವವನ್ನು ನಮ್ಮ ಪೂರ್ವಿಕರು ಅರಿತಿದ್ದರು. ಗುಡಿಸಲಿನಲ್ಲಿ ಜೀವಿಸುತ್ತಿರುವ ವ್ಯಕ್ತಿ ಬೋಧನೆ ಮಾಡದೇ ಇರಬಹುದು. ಆದರೆ ಆತನ ರಕ್ತನಾಳದಲ್ಲಿ ಧರ್ಮ ಹರಿಯುತ್ತಿರುತ್ತದೆ’ ಎಂದರು ಭಾಗವತ್‌ ಹೇಳಿದರು.

‘ಕಾಲದಿಂದ ಕಾಲಕ್ಕೆ ಭಾರತವು ವಿಶ್ವಕ್ಕೆ ಧರ್ಮವನ್ನು ನೀಡುತ್ತಲೇ ಬಂದಿದೆ. ಪುಸ್ತಕಗಳು, ವಾಗ್ಮಿಗಳನ್ನು ಹೊಂದಿದ್ದೇವೆ. ಧರ್ಮವು ಆಚರಣೆ ಮತ್ತು ಜೀವನದ ಭಾಗವೇ ಆಗಿದೆ’ ಎಂದರು.

ಧರ್ಮದ ಕೆಲಸಗಳನ್ನು ಕೆಲವರು ಹಾಳು ಮಾಡಲು ಬಯಸುತ್ತಾರೆ. ಉತ್ತಮ ಕೆಲಸ ಮಾಡುವವರಿಗೆ ಪ್ರತಿಫಲದ ನಿರೀಕ್ಷೆ ಬೇಕಿಲ್ಲ. ಆದರೆ ಗರ್ವವು ಪವಿತ್ರ ಕಾರ್ಯವನ್ನು ಹಾಳು ಮಾಡುತ್ತದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.