ADVERTISEMENT

ಹಿಂದೂ–ಮುಸ್ಲಿಮರ ಮಧ್ಯೆ ಸಂವಾದಕ್ಕೆ ಚಾಲನೆ ಅಗತ್ಯ: ಭಾಗವತ್‌

ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್‌, ಮುಸ್ಲಿಂ ಧರ್ಮಗುರುಗಳು ಸಮ್ಮತಿ

ಪಿಟಿಐ
Published 24 ಜುಲೈ 2025, 16:40 IST
Last Updated 24 ಜುಲೈ 2025, 16:40 IST
   

ನವದೆಹಲಿ: ‘ರಾಷ್ಟ್ರದ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಹಿಂದೂಗಳು ಹಾಗೂ ಮುಸ್ಲಿಮರ ನಡುವೆ ಸಂವಾದ, ಮಾತುಕತೆ ನಡೆಸುವುದಕ್ಕೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್ ಹಾಗೂ ಸಮಾಜದ ಧರ್ಮ ಗುರುಗಳು ಸಮ್ಮತಿಸಿದರು’ ಎಂದು ಅಖಿಲ ಭಾರತ ಇಮಾಮ್ ಸಂಘಟನೆ ಮುಖ್ಯಸ್ಥ ಉಮರ್ ಅಹ್ಮದ್‌ ಇಲಿಯಾಸಿ ಗುರುವಾರ ಹೇಳಿದ್ದಾರೆ.

ಇಲ್ಲಿನ ಹರಿಯಾಣ ಭವನದಲ್ಲಿ ಸಂಘಟನೆಯು ಆಯೋಜಿಸಿದ್ದ ಸಭೆಯಲ್ಲಿ ಇಮಾಮರು, ಮುಫ್ತಿ ಹಾಗೂ ಮದರಸಾಗಳ ಮುಖ್ಯಸ್ಥರು (ಮೊಹ್ತಮಿಮ್‌) ಸೇರಿ ಮುಸ್ಲಿಂ ಸಮಾಜದ 60 ಪ್ರಮುಖರು ಪಾಲ್ಗೊಂಡಿದ್ದರು. ಮೂರೂವರೆ ತಾಸು ನಡೆದ ಸಭೆಯಲ್ಲಿ, ಸಮಾಜದ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಎಂದು ಇಲಿಯಾಸಿ ತಿಳಿಸಿದ್ದಾರೆ.

ಅಖಿಲ ಭಾರತ ಇಮಾಮ್‌ ಸಂಘಟನೆಯ ಆಹ್ವಾನದ ಮೇರೆಗೆ ಮೋಹನ್‌ ಭಾಗವತ್‌ ಸಭೆಯಲ್ಲಿ ಪಾಲ್ಗೊಂಡಿದ್ದರು. ಆರ್‌ಎಸ್ಎಸ್‌ ಮುಖಂಡರಾದ ಕೃಷ್ಣ ಗೋಪಾಲ್‌ ಹಾಗೂ ಇಂದ್ರೇಶ್‌ ಕುಮಾರ್‌ ಕೂಡ ಹಾಜರಿದ್ದರು.

ADVERTISEMENT

‘ಇಂದಿನ ಸಭೆ ಸಕಾರಾತ್ಮಕವಾಗಿ ಇತ್ತು ಎಂಬುದಾಗಿ ಆರ್‌ಎಸ್‌ಎಸ್‌ ಹೇಳಿತು. ದೇಶದ ಹಿತಾಸಕ್ತಿ ಕಾಪಾಡುವುದಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು. ಈ ಉದ್ದೇಶ ಈಡೇರಿಕೆಗಾಗಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸಮಾಜದ ಎಲ್ಲ ವರ್ಗಗಳ ನಡುವೆ ವ್ಯಾಪಕ ಸಂವಾದಗಳು ನಡೆಯಬೇಕು. ಇದು ನಿರಂತರ ಪ್ರಕ್ರಿಯೆ ಎಂಬ ತನ್ನ ನಿಲುವನ್ನು ಕೂಡ ಆರ್‌ಎಸ್‌ಎಸ್‌ ಸಭೆಗೆ ವಿವರಿಸಿತು’ ಎಂದು ಆರ್‌ಎಸ್‌ಎಸ್‌ನ ಮಾಧ್ಯಮ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಸುನಿಲ್‌ ಅಂಬೇಕರ್ ಹೇಳಿದರು.

‘ಪ್ರಮುಖ ರಾಷ್ಟ್ರೀಯ ವಿದ್ಯಮಾನಗಳ ಕುರಿತು ಸಭೆಯಲ್ಲಿ ಚರ್ಚಸಲಾಯಿತು. ಮಂದಿರಗಳು ಹಾಗೂ ಮಸೀದಿಗಳ ನಡುವೆ ಮಾತುಕತೆ ನಡೆಯಬೇಕು, ಪೂಜಾರಿಗಳು ಹಾಗೂ ಇಮಾಮರ ನಡುವೆ, ಗುರುಕುಲಗಳು ಹಾಗೂ ಮದರಸಾಗಳ ಮಧ್ಯೆ ಸಂವಾದ ನಡೆಯಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು’ ಎಂದು ಇಲಿಯಾಸಿ ಹೇಳಿದರು.

‘ಸಭೆ ಆಯೋಜಿಸಿರುವ ಕುರಿತು ಭಾಗವತ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ, ಉಭಯ ಸಮುದಾಯಗಳ ಮಧ್ಯೆ ರಚನಾತ್ಮಕ ಸಂವಾದ ನಡೆಸುವ ಪ್ರಯತ್ನಗಳನ್ನು ಅಖಿಲ ಭಾರತ ಇಮಾಮ್ ಸಂಘಟನೆ ಮತ್ತು ಆರ್‌ಎಸ್‌ಎಸ್‌ ಮುಂದುವರಿಸಿಕೊಂಡು ಹೋಗಬೇಕು ಎಂಬುದಕ್ಕೆ ಕೂಡ ಸಭೆಯಲ್ಲಿ ಒಮ್ಮತ ವ್ಯಕ್ತವಾಯಿತು’ ಎಂದು ಪ್ರಶ್ನೆಯೊಂದಕ್ಕೆ ಇಲಿಯಾಸಿ ಉತ್ತರಿಸಿದರು.

ಉಮರ್ ಅಹ್ಮದ್‌ ಇಲಿಯಾಸಿ
ಮೋಹನ್‌ ಭಾಗವತ್
ನಿರಂತರ ಮಾತುಕತೆಯಿಂದ ಪ್ರತಿಯೊಂದು ಸಮಸ್ಯೆ ಬಗೆಹರಿಸಬಹುದು. ತಪ್ಪುಕಲ್ಪನೆಗಳನ್ನು ಹೋಗಲಾಡಿಸಲು ಪರಸ್ಪರರಲ್ಲಿ ನಂಬಿಕೆ ವೃದ್ಧಿಸಲು ಕೂಡ ಮಾತುಕತೆಯೇ ಸಾಧನ
ಉಮರ್ ಅಹ್ಮದ್‌ ಇಲಿಯಾಸಿ ಅಖಿಲ ಭಾರತ ಇಮಾಮ್ ಸಂಘಟನೆ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.