
ಕೋಲ್ಕತ್ತ: ‘ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಹೀಗಾಗಿ ಅದಕ್ಕೆ ಸಾಂವಿಧಾನಿಕ ಅನುಮೋದನೆಯ ಅಗತ್ಯವಿಲ್ಲ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಒತ್ತಿ ಹೇಳಿದರು.
ಆರ್‌ಎಸ್‌ಎಸ್‌ನ 100ನೇ ವರ್ಷಾಚರಣೆ ಸಂದರ್ಭದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘100 ವ್ಯಾಖ್ಯಾನ ಮಾಲಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತ ಹಿಂದೂ ರಾಷ್ಟ್ರವಾಗಿದೆ. ಅಲ್ಲದೆ ಭಾರತೀಯ ಸಂಸ್ಕೃತಿಯನ್ನು ಎಲ್ಲಿಯವರೆಗೆ ಪ್ರಶಂಸಿಸಲಾಗುತ್ತದೆಯೋ ಅಲ್ಲಿಯವರೆಗೆ ಅದು ಹಿಂದೂ ರಾಷ್ಟ್ರವಾಗಿಯೇ ಉಳಿಯುತ್ತದೆ’ ಎಂದು ತಿಳಿಸಿದರು.
‘ಸೂರ್ಯ ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಾನೆ; ಇದು ಎಂದಿನಿಂದ ನಡೆಯುತ್ತಿದೆ ಎಂಬುದು ನಮಗೆ ಗೊತ್ತಿಲ್ಲ. ಹಾಗೆಂದು, ಇದಕ್ಕೂ ಸಾಂವಿಧಾನಿಕ ಅನುಮೋದನೆಯ ಅಗತ್ಯವಿದೆಯೇ? ಹಿಂದೂಸ್ತಾನವು ಹಿಂದೂ ದೇಶ. ಭಾರತವನ್ನು ತಮ್ಮ ಮಾತೃಭೂಮಿ ಎಂದು ಪರಿಗಣಿಸುವವರು, ಭಾರತೀಯ ಸಂಸ್ಕೃತಿಯನ್ನು ಗೌರವಿಸುವವರು ಇರುವ ತನಕ ಇದು ಹಿಂದೂ ದೇಶ. ಅಷ್ಟೇ ಏಕೆ, ಹಿಂದೂಸ್ತಾನದಲ್ಲಿ ತಮ್ಮ ಪೂರ್ವಜರ ವೈಭವ, ಸಂಸ್ಕೃತಿಯನ್ನು ನಂಬುವ ಮತ್ತು ಪಾಲಿಸುವಂತಹ ಒಬ್ಬ ವ್ಯಕ್ತಿ ಜೀವಂತವಾಗಿದ್ದರೂ ಇದು ಹಿಂದೂ ರಾಷ್ಟ್ರವೇ ಆಗಿರುತ್ತದೆ. ಇದೇ ಸಂಘದ ಸಿದ್ಧಾಂತವೂ ಆಗಿದೆ’ ಎಂಬುದಾಗಿ ಅವರು ಹೇಳಿದ್ದಾರೆಂದು ‘ಎನ್‌ಡಿಟಿವಿ’ ವರದಿ ಮಾಡಿದೆ.
ಸಂವಿಧಾನದಲ್ಲಿ ‘ಹಿಂದೂ ರಾಷ್ಟ್ರ’ ಪದವನ್ನು ಸೇರಿಸಲು ಸಂಸತ್ತು ಅದರ ತಿದ್ದುಪಡಿ ಮಾಡಲಿ ಅಥವಾ ಮಾಡದಿರಲಿ, ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ನಾವು ಹಿಂದೂಗಳಾಗಿದ್ದು, ನಮ್ಮ ರಾಷ್ಟ್ರ ಹಿಂದೂ ದೇಶ ಎಂಬುದು ಸತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು. ಅಲ್ಲದೆ ಸಂಘವು ‘ಮುಸ್ಲಿಂ ವಿರೋಧಿ’ ಅಲ್ಲ ಎಂದೂ ಅವರು ಇದೇ ವೇಳೆ ಒತ್ತಿ ಹೇಳಿದರು.
ಭಾಗವತ್ ಭಾಷಣದ ಪ್ರಮುಖಾಂಶಗಳು:
ಭಾರತದಲ್ಲಿನ ಬಹುಸಂಖ್ಯಾತರು ಹಿಂದೂ ಧರ್ಮದ ಜತೆಗೆ ಸಂಬಂಧ ಹೊಂದಿದ್ದಾರೆ. ಹೀಗಾಗಿ ಆರ್‌ಎಸ್‌ಎಸ್ ಯಾವಾಗಲೂ ಭಾರತವನ್ನು ಹಿಂದೂ ರಾಷ್ಟ್ರ ಎಂದು ಪ್ರತಿಪಾದಿಸುತ್ತಾ ಬಂದಿದೆ
‘ಜಾತ್ಯತೀತ’ ಪದವು ಮೂಲತಃ ಸಂವಿಧಾನದ ಪೀಠಿಕೆಯ ಭಾಗವಾಗಿರಲಿಲ್ಲ. ಅಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತುಪರಿಸ್ಥಿತಿ ಹೇರಿದ್ದಾಗ, 1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ತರುವ ಮೂಲಕ ‘ಸಮಾಜವಾದಿ’ ಪದದ ಜತೆಗೆ ‘ಜಾತ್ಯತೀತ’ ಪದವನ್ನು ಸೇರಿಸಲಾಯಿತು
ಹುಟ್ಟನ್ನು ಆಧರಿಸಿದ ಜಾತಿ ವ್ಯವಸ್ಥೆಯು ಹಿಂದುತ್ವದ ಲಕ್ಷಣ ಅಲ್ಲ
ಸಂಘವು ಮುಸ್ಲಿಂ– ವಿರೋಧಿ ಅಲ್ಲ. ಈ ಬಗ್ಗೆ ತಪ್ಪು ಗ್ರಹಿಕೆಗಳಿದ್ದು, ಅವುಗಳನ್ನು ಹೋಗಲಾಡಿಸಬಹುದು. ಸಂಘದ ಕೆಲಸವನ್ನು ಅರ್ಥ ಮಾಡಿಕೊಳ್ಳಲು ಜನರು ಸಂಘದ ಕಚೇರಿಗಳು ಮತ್ತು ಶಾಖೆಗಳಿಗೆ ಭೇಟಿ ನೀಡಿ
ಸಂಘವು ಹಿಂದೂಗಳ ರಕ್ಷಣೆಯನ್ನು ಪ್ರತಿಪಾದಿಸುತ್ತದೆ. ಸಂಘದ ಸದಸ್ಯರು ಕಟ್ಟಾ ರಾಷ್ಟ್ರೀಯವಾದಿಗಳೇ ಹೊರತು ಮುಸ್ಲಿಂ ವಿರೋಧಿಗಳಲ್ಲ. ಇದನ್ನು ಜನರು ಅರ್ಥಮಾಡಿಕೊಂಡಿದ್ದಾರೆ
ಆರ್‌ಎಸ್‌ಎಸ್ ಪಾರದರ್ಶಕವಾಗಿ ಕೆಲಸ ಮಾಡುತ್ತದೆ. ಸಂಘವು ಮುಸ್ಲಿಂ ವಿರೋಧಿ ಎಂಬ ಗ್ರಹಿಕೆ ಇರುವವರು ಯಾವಾಗ ಬೇಕಾದರೂ ಸಂಘಕ್ಕೆ ಬಂದು ಪರಿಶೀಲಿಸಬಹುದು. ಒಂದು ವೇಳೆ ಅಂತಹದ್ದೇನಾದರೂ ನೀವು ಗಮನಿಸಿದರೆ ನಿಮ್ಮ ಅಭಿಪ್ರಾಯವನ್ನು ನೀವು ಇಟ್ಟುಕೊಳ್ಳಬಹುದು. ಗಮನಿಸದಿದ್ದರೆ ಆರ್‌ಎಸ್ಎಸ್ ಬಗ್ಗೆಗಿನ ನಿಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ಳಬಹುದು
ಆರ್‌ಎಸ್‌ಎಸ್ ಬಗ್ಗೆ ಅರ್ಥಮಾಡಿಕೊಳ್ಳಲು ಬಹಳಷ್ಟಿದೆ. ಆದರೆ ಅರ್ಥಮಾಡಿಕೊಳ್ಳಲು ನೀವು ಬಯಸದೇ ಇದ್ದರೆ, ನಿಮ್ಮ ಮನಸ್ಸನ್ನು ಯಾರಿಂದಲೂ ಬದಲಿಸಲು ಆಗದು. ಕಲಿಯಲು ಇಷ್ಟವಿಲ್ಲದವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ
ಕಾರ್ಮಿಕನ ಹತ್ಯೆಯಲ್ಲಿ ಆರ್‌ಎಸ್‌ಎಸ್ ಕೈವಾಡ: ಸಿಪಿಎಂ
ಛತ್ತೀಸಗಢದಿಂದ ವಲಸೆ ಬಂದಿದ್ದ ಕಾರ್ಮಿಕನ ಹತ್ಯೆಯಲ್ಲಿ ಆರ್‌ಎಸ್‌ಎಸ್ ಸದಸ್ಯರ ಕೈವಾಡವಿದೆ ಎಂದು ಸಿಪಿಎಂ ಆರೋಪಿಸಿದೆ. ಪಾಲಕ್ಕಾಡ್‌ನ ವಲಯಾರ್‌ನಲ್ಲಿ ಡಿ. 18ರಂದು ರಾಮ್ ನಾರಾಯಣ್ ಬಘೇಲ್ (31) ಎಂಬ ವ್ಯಕ್ತಿಯನ್ನು ಕಳ್ಳ ಎಂದು ತಪ್ಪಾಗಿ ಭಾವಿಸಿದ ಗುಂಪು ದಾಳಿ ಮಾಡಿ ಕೊಲೆ ಮಾಡಿತ್ತು. ಗುಂಪಿನಲ್ಲಿದ್ದ ಕೆಲವರು ಬಘೇಲ್ ಅವರನ್ನು ಬಾಂಗ್ಲಾದೇಶದಿಂದ ಬಂದಿದ್ದೀರಾ ಎಂದು ಪ್ರಶ್ನಿಸಿದ್ದರು ಎಂದು ವರದಿಯಾಗಿದೆ ಅದು ದೂರಿದೆ. ಕೇರಳದ ಸಚಿವ ಎಂ.ಬಿ.ರಾಜೇಶ್ ಮತ್ತು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಅವರು ಆರ್‌ಎಸ್‌ಎಸ್ ಮೇಲೆ ಈ ಕುರಿತು ಆರೋಪ ಮಾಡಿದ್ದಾರೆ. ‘ಬಾಂಗ್ಲಾದೇಶ ಮೂಲದವರೇ ಎಂದು ಕೇಳಿ ಬಘೇಲ್ ಅವರನ್ನು ಹತ್ಯೆ ಮಾಡಲಾಗಿದೆ. ಅವರು ಸಂಘ ಪರಿವಾರದ ಕೋಮು ರಾಜಕೀಯದ ಬಲಿಪಶು’ ಎಂದು ಸಚಿವ ರಾಜೇಶ್ ಆರೋಪಿಸಿದರು. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ‘ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದಿದ್ದಾರೆ. ಬಘೇಲ್ ಕುಟುಂಬದವರ ಪ್ರತಿಭಟನೆ: ರಾಮ್ ನಾರಾಯಣ್ ಬಘೇಲ್ ಅವರ ಶವವನ್ನು ಸ್ವೀಕರಿಸಲು ನಿರಾಕರಿಸಿ ಅವರ ಕುಟುಂಬದವರು ಪ್ರತಿಭಟನೆ ನಡೆಸಿದರು. ಸಚಿವ ರಾಜನ್ ಅವರು ಕುಟುಂಬದವರ ಜತೆ ಮಾತುಕತೆ ನಡೆಸಿ ₹10 ಲಕ್ಷ ಪರಿಹಾರ ಕೊಡಿಸುವ ಭರವಸೆ ನೀಡಿದರು. ಅಲ್ಲದೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ಬಳಿಕ ಕುಟುಂಬದವರು ಪ್ರತಿಭಟನೆ ಅಂತ್ಯಗೊಳಿಸಿ ಶವ ಪಡೆಯಲು ನಿರ್ಧರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.