ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ಇ.ಡಿ ವಿಚಾರಣೆಗೆ ಹಾಜರಾದ ಮಲಯಾಳ ನಟ ಜಯಸೂರ್ಯ ದಂಪತಿ

ಪಿಟಿಐ
Published 29 ಡಿಸೆಂಬರ್ 2025, 13:29 IST
Last Updated 29 ಡಿಸೆಂಬರ್ 2025, 13:29 IST
ಜಯಸೂರ್ಯ
ಜಯಸೂರ್ಯ   

ಕೊಚ್ಚಿ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಕುರಿತ ವಿಚಾರಣೆಗೆ ಮಲಯಾಳ ನಟ ಜಯಸೂರ್ಯ ಮತ್ತು ಅವರ ಪತ್ನಿ ಸೋಮವಾರ ಜಾರಿ ನಿರ್ದೇಶನಾಲಯ(ಇ.ಡಿ)ದ ಮುಂದೆ ಹಾಜರಾದರು.

‘ಸೇವ್‌ ಬಾಕ್ಸ್‌’ ಎಂಬ ಆನ್‌‌ಲೈನ್‌ ಅಪ್ಲಿಕೇಶನ್ ಮೂಲಕ ಹಲವರಿಗೆ ವಂಚಿಸಿದ ಆರೋಪದಡಿ ತ್ರಿಶ್ಯೂರ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ನಾಲ್ಕು ಪ್ರಕರಣಗಳ ಆಧಾರದಲ್ಲಿ  ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ.

‘ಸೇವ್‌ ಬಾಕ್ಸ್‌’ ಹೂಡಿಕೆ ಯೋಜನೆಯನ್ನು ನಿರ್ವಹಿಸುತ್ತಿರುವ ಸ್ವಾತಿ ರಹೀಮ್‌ ಅವರನ್ನು ಇ.ಡಿ ವಿಚಾರಣೆಗೆ ಒಳಪಡಿಸಿತ್ತು. ‘ಹೂಡಿಕೆದಾರರಿಂದ ಬಂದ ಹಣವನ್ನು ಚಿತ್ರೋದ್ಯಮಕ್ಕೆ ಹಾಕಲಾಗಿದೆ. ಯೋಜನೆಯ ರಾಯಭಾರಿಯಾಗಿದ್ದ ನಟ ಜಯಸೂರ್ಯ ಅವರಿಗೂ ಹಣ ವರ್ಗಾವಣೆಯಾಗಿದೆ’ ಎಂದು ರಹೀಮ್ ತಿಳಿಸಿದ್ದರು. 

ADVERTISEMENT

‘ಬ್ಯಾಂಕ್‌ ಮೂಲಕ ಸ್ವಲ್ಪ ಹಣವನ್ನು(₹30 ಲಕ್ಷ) ಜಯಸೂರ್ಯ ಅವರ ಪತ್ನಿಗೆ ವರ್ಗಾಯಿಸಲಾಗಿತ್ತು. ಉಳಿದ ಹಣವನ್ನು ನಗದು ರೂಪದಲ್ಲಿ ನೀಡಲಾಗಿತ್ತು’ ಎಂದು ರಹೀಮ್‌ ತಿಳಿಸಿದ್ದರು. 

‘ಸೇವ್‌ ಬಾಕ್ಸ್‌’ ಕಂಪನಿ ಜೊತೆ ₹75 ಲಕ್ಷಕ್ಕೆ ಜಾಹೀರಾತು ಒಪ್ಪಂದ ನಡೆದಿತ್ತು. ಅದರಲ್ಲಿ ₹69 ಲಕ್ಷ ಪಾವತಿಯಾಗಿದೆ. ಪೂರ್ತಿ ಹಣ ಪಾವತಿಯಾ‌ಗದ ಕಾರಣ ಜಾಹೀರಾತು ಬಿಡುಗಡೆಗೊಂಡಿಲ್ಲ ಎಂದು ಜಯಸೂರ್ಯ ದಂಪತಿ ಇ.ಡಿಗೆ ಮಾಹಿತಿ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.