ADVERTISEMENT

ಪೂರ್ವ ಲಡಾಖ್‌ನಲ್ಲಿ ಯಾವುದೇ ಸಂಘರ್ಷ, ಆಕ್ರಮಣ ಪ್ರಯತ್ನ ನಡೆದಿಲ್ಲ: ಭಾರತೀಯ ಸೇನೆ

ಪಿಟಿಐ
Published 14 ಜುಲೈ 2021, 7:48 IST
Last Updated 14 ಜುಲೈ 2021, 7:48 IST
ಪೂರ್ವ ಲಡಾಖ್‌ನ ಗಡಿ ಭಾಗವಾದ ಲುಕುಂಗ್‌ನ ದೃಶ್ಯ (ಸಂಗ್ರಹ ಚಿತ್ರ)
ಪೂರ್ವ ಲಡಾಖ್‌ನ ಗಡಿ ಭಾಗವಾದ ಲುಕುಂಗ್‌ನ ದೃಶ್ಯ (ಸಂಗ್ರಹ ಚಿತ್ರ)   

ನವದೆಹಲಿ: ಪೂರ್ವ ಲಡಾಖ್‌ ಪ್ರದೇಶಗಳ ಆಕ್ರಮಣಕ್ಕಾಗಿ ಭಾರತ ಅಥವಾ ಚೀನಾ ಸೇನೆಯಿಂದ ಯಾವುದೇ ರೀತಿಯ ಪ್ರಯತ್ನಗಳೂ ನಡೆದಿಲ್ಲ ಎಂದು ಪ್ರತಿಪಾದಿಸಿರುವ ಭಾರತೀಯ ಸೇನೆ, ಆ ಪ್ರದೇಶದಲ್ಲಿ ಬಾಕಿ ಉಳಿದಿರುವ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಉಭಯ ರಾಷ್ಟ್ರಗಳ ನಡುವೆ ಮಾತುಕತೆ ಮುಂದುವರಿದಿರುವುದಾಗಿ ತಿಳಿಸಿದೆ.

ಪೂರ್ವ ಲಡಾಖ್ ಪ್ರದೇಶದಲ್ಲಿ ಸೇನೆಯು, ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕರ ಚಲನವಲನ ಸೇರಿದಂತೆ, ಎಲ್ಲ ರೀತಿಯ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ತಿಳಿಸಿದೆ.

ಚೀನಾದ ಸೇನೆ ಪೂರ್ವ ಲಡಾಖ್‌ನಲ್ಲಿರುವ ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ದಾಟಿದೆ ಮತ್ತು ಎರಡು ದೇಶಗಳ ನಡುವೆ ಘರ್ಷಣೆ ನಡೆದಿದೆ ಎಂದು ಮಾಧ್ಯಮದಲ್ಲಿ ಪ್ರಕಟವಾಗಿರುವ ವರದಿಗೆ ಭಾರತೀಯ ಸೇನೆ ಈ ರೀತಿ ಸ್ಪಷ್ಟನೆ ನೀಡಿದೆ.

ADVERTISEMENT

’ಪೂರ್ವ ಲಡಾಖ್‌ ಗಡಿ ಪ್ರದೇಶದಲ್ಲಿ ಸೇನೆಗಳನ್ನು ವಾಪಸ್‌ ಕರೆಸಿಕೊಳ್ಳುವ ಕುರಿತು ಈ ವರ್ಷದ ಫೆಬ್ರವರಿಯಲ್ಲಿ ಎರಡೂ ದೇಶಗಳ ನಡುವೆ ಒಪ್ಪಂದ ನಡೆದ ನಂತರ, ಈ ಪ್ರದೇಶಗಳನ್ನು ಆಕ್ರಮಿಸುವಂತಹ ಯಾವುದೇ ಪ್ರಯತ್ನಗಳು ಎರಡೂ ದೇಶಗಳಿಂದಲೂ ನಡೆದಿಲ್ಲ. ವರದಿಯಲ್ಲಿ ಉಲ್ಲೇಖವಾಗಿರುವಂತೆ ಗಾಲ್ವನ್ ಅಥವಾ ಇನ್ನಾವುದೇ ಪ್ರದೇಶದಲ್ಲಿ ಯಾವುದೇ ಘರ್ಷಣೆಗಳು ನಡೆದಿಲ್ಲ’ ಎಂದು ಸೇನೆ ಸ್ಪಷ್ಟಪಡಿಸಿದೆ.‌ ವರದಿಯಲ್ಲಿ ಉಲ್ಲೇಖಿಸಿರುವ ’ಚೀನಾದೊಂದಿಗಿನ ಒಪ್ಪಂದವೂ ಮುರಿದುಬಿದ್ದಿದೆ’ ಎಂಬ ಅಂಶವೂ ಸುಳ್ಳು ಮತ್ತು ಆಧಾರರಹಿತವಾಗಿದೆ ಎಂದು ಸೇನೆ ತಿಳಿಸಿದೆ.

’ಗಡಿ ಪ್ರದೇಶಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ವಿಷಯಗಳನ್ನು ಇತ್ಯರ್ಥಗೊಳಿಸಲು ಎರಡೂ ಕಡೆ ಮಾತುಕತೆ ನಡೆಯುತ್ತಿದೆ. ಇದರ ಜತೆಗೆ, ತಮ್ಮ ತಮ್ಮ ಪ್ರದೇಶಗಳಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ಗಸ್ತು ತಿರುಗುವುದು ಮುಂದುವರಿದಿದೆ. ಚೀನಾದ ಸೇನೆಯ ಚಲನವಲನ ಸೇರಿದಂತೆ, ಎಲ್ಲ ರೀತಿಯ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ’ ಎಂದು ಸೇನೆ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.