ADVERTISEMENT

ಮುಂಗಾರು ಋತುವಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ: ಐಎಂಡಿ

ಪಿಟಿಐ
Published 30 ಸೆಪ್ಟೆಂಬರ್ 2023, 16:29 IST
Last Updated 30 ಸೆಪ್ಟೆಂಬರ್ 2023, 16:29 IST
...
...   

ನವದೆಹಲಿ: ದೇಶದಲ್ಲಿ ನಾಲ್ಕು ತಿಂಗಳ ಮುಂಗಾರು ಋತುವಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಅಂದರೆ, ದೀರ್ಘಾವಧಿಯ ಸರಾಸರಿ 868.6 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ 820 ಮಿ.ಮೀ ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ತಿಳಿಸಿದೆ.

ಈ ಬಾರಿಯ ಮುಂಗಾರು ಶೇ 94.4 ಸಂಚಿತ ಮಳೆಯೊಂದಿಗೆ ಕೊನೆಗೊಂಡಿದೆ. ಇದನ್ನು ‘ಸಾಮಾನ್ಯ’ ಮಳೆ ಎಂದು ಪರಿಗಣಿಸಲಾಗಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ದೀರ್ಘಾವಧಿಯ ಸರಾಸರಿ (ಎಲ್‌ಪಿಆರ್‌) ಶೇ 94 ಮತ್ತು ಶೇ 106ರ ನಡುವಿನ ಮಳೆಯನ್ನು ‘ಸಾಮಾನ್ಯ’ ಮಳೆಯೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಮಾನ್ಸೂನ್ ಋತುವಿನಲ್ಲಿ ದೇಶದಾದ್ಯಂತ ಆಗಿರುವ ಸಾಮಾನ್ಯ ಮಳೆಯು ಪ್ರಾದೇಶಿಕವಾಗಿ ಒಂದೇ ರೀತಿ ಸುರಿದಿದೆ ಎಂದರ್ಥವಲ್ಲ. ಹವಾಮಾನ ಬದಲಾವಣೆಯು, ಮಾನ್ಸೂನ್ ಮೇಲೆ ‌ಗಂಭೀರ ಪರಿಣಾಮ ಬೀರಿದೆ. ಅದು ತೀವ್ರ ಪ್ರತಿಕೂಲ ಹವಾಮಾನ ಮತ್ತು ಶುಷ್ಕ ವಾತಾವರಣ ಉಂಟು ಮಾಡುತ್ತಿರುವುದನ್ನು ಸಂಶೋಧನೆ ತೋರಿಸಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಗುಡ್ಡಗಾಡು ಮತ್ತು ದ್ವೀಪ ಹೊರತುಪಡಿಸಿದ ಪ್ರದೇಶದಲ್ಲಿ ಶೇ.73 ರಷ್ಟು ಮಳೆ ದಾಖಲಾಗಿದ್ದರೆ, ಶೇ 18 ರಷ್ಟು ಮಳೆ ಕೊರತೆಯಾಗಿದೆ. ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಸಾಮಾನ್ಯ 1,367.3 ಮಿ.ಮೀ.ಗೆ ಪ್ರತಿಯಾಗಿ 1,115 ಮಿ.ಮೀ. ಮಳೆ ದಾಖಲಾಗಿದೆ. ಇಲ್ಲೂ ಶೇ. 18 ರಷ್ಟು ಮಳೆ ಕೊರತೆ ಉಂಟಾಗಿದೆ. ವಾಯವ್ಯ ಭಾರತದಲ್ಲಿ ಎಲ್‌ಪಿಆರ್‌ನ 587.6 ಮಿ.ಮೀ.ಗೆ ಪ್ರತಿಯಾಗಿ 593 ಮಿ.ಮೀ. ಮಳೆ ಬಿದ್ದಿದೆ. ಮಾನ್ಸೂನ್ ಮಳೆ ಮೇಲೆಯೇ ಅವಲಂಬಿತವಾಗಿರುವ ಕೃಷಿ ಪ್ರಧಾನ, ಮಧ್ಯ ಭಾರತದಲ್ಲಿ ಸಾಮಾನ್ಯ 978 ಮಿ.ಮೀ.ಗೆ ಪ್ರತಿಯಾಗಿ 981.7 ಮಿ.ಮೀ ದಾಖಲಾಗಿದೆ. ದಕ್ಷಿಣ ದ್ವೀಪದಲ್ಲಿ ಶೇ 8ರಷ್ಟು ಮಳೆ ಕೊರತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. 

ದೇಶವು ಈ ವರ್ಷ ಜೂನ್‌ನಲ್ಲಿ ಮಳೆ ಕೊರತೆ ಅನುಭವಿಸಿತು. ಆದರೆ, ಜುಲೈನಲ್ಲಿ ಅತಿಯಾದ ಮಳೆ ಸುರಿಯಿತು. ಎಲ್ ನಿನೊ ಪರಿಣಾಮದ ಕಾರಣದಿಂದ ಈ ವರ್ಷದ ಆಗಸ್ಟ್‌, 1901ರ ನಂತರದ ಅತ್ಯಂತ ಶುಷ್ಕ ತಿಂಗಳು ಮತ್ತು ದೇಶದಲ್ಲಿ ಇದುವರೆಗೆ ದಾಖಲಾದ ಅತ್ಯಂತ ಹೆಚ್ಚು ಉಷ್ಣಾಂಶದ ತಿಂಗಳಾಗಿ ಗುರುತಿಸಿಕೊಂಡಿತು. ಆದಾಗ್ಯೂ ವಾತಾವರಣದಲ್ಲಿನ ಕಡಿಮೆ ಒತ್ತಡದಿಂದಾಗಿ ಸೆಪ್ಟೆಂಬರ್‌ ತಿಂಗಳು ಹೆಚ್ಚಿನ ಮಳೆ ಸುರಿದಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.