ADVERTISEMENT

ಮುಂಗಾರು ಅಧಿವೇಶನ: ಸರ್ಕಾರ, ವಿಪಕ್ಷ ಸದನಕ್ಕೆ ಸಜ್ಜು

ಅಗ್ನಿಪಥ, ಬೆಲೆ ಏರಿಕೆ ಚರ್ಚೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 17:04 IST
Last Updated 17 ಜುಲೈ 2022, 17:04 IST
ಸಂಸತ್‌
ಸಂಸತ್‌   

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪರಸ್ಪರ ಮುಖಾ ಮುಖಿಯಾಗಲು ಸರ್ಕಾರ ಮತ್ತು ವಿರೋಧ ಪಕ್ಷಗಳು ಸಜ್ಜಾಗಿವೆ. ರಕ್ಷಣಾ ಪಡೆಗಳ ಅಲ್ಪಾವಧಿ ನೇಮಕಾತಿಯ ಅಗ್ನಿಪಥ ಯೋಜನೆ, ನಿರುದ್ಯೋಗ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆಯಂತಹ ವಿಚಾರಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿರೋಧ ಪಕ್ಷಗಳು ಸಿದ್ಧವಾಗಿವೆ. ವಿರೋಧ ಪಕ್ಷಗಳಿಗೆ ತಕ್ಕ ಎದುರೇಟು ನೀಡಲು ಸರ್ಕಾರವೂ ಸಜ್ಜಾಗಿದೆ.

24 ಹೊಸ ಮಸೂದೆಗಳು ಸಂಸತ್ತಿನಲ್ಲಿ ಮಂಡನೆಯಾಗಲು ಕಾದಿವೆ. ಈಗಾಗಲೇ ಮಂಡನೆಯಾಗಿರುವ ಎಂಟು ಮಸೂದೆಗಳು ಬಾಕಿ ಇವೆ. ಮುಂಗಾರು ಅಧಿವೇಶನವು ಸೋಮವಾರ ಆರಂಭವಾಗಿ ಆಗಸ್ಟ್‌ 12ರಂದು ಕೊನೆಯಾಗಲಿದೆ. ಒಟ್ಟು 26 ದಿನಗಳಲ್ಲಿ 18 ದಿನ ಕಲಾಪ ನಡೆಯಲಿದೆ. ಈ ಅಧಿವೇಶನದ ಅವಧಿಯಲ್ಲೇ ರಾಷ್ಟ್ರಪತಿ, ಉಪರಾಷ್ಟ್ರಪತಿ ಸ್ಥಾನಗಳಿಗೆ ಚುನಾವಣೆ ಮತ್ತು ಮತ ಎಣಿಕೆ ನಡೆಯಲಿರುವುದು ವಿಶೇಷ.

ಅಧಿವೇಶನದ ಮುನ್ನಾದಿನ ಅಂದರೆ ಭಾನುವಾರ ಸರ್ವಪಕ್ಷ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ 35 ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧ ಎಂಬ ಸಂದೇಶವನ್ನು ವಿರೋಧ ಪಕ್ಷಗಳು ಈ ಸಭೆಯಲ್ಲಿ ನೀಡಿವೆ.

ADVERTISEMENT

ಸಂಸತ್ತಿನ ನಿಯಮಗಳು ಮತ್ತು ಪ್ರಕ್ರಿಯೆಗಳ ಅನುಸಾರ ಯಾವುದೇ ವಿಚಾರದ ಚರ್ಚೆಗೆ ಸರ್ಕಾರ ಸಿದ್ಧ ಎಂದು ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ನಗಣ್ಯ ವಿಚಾರಗಳನ್ನು ದೊಡ್ಡದನ್ನಾಗಿ ವಿರೋಧ ಪಕ್ಷಗಳು ಮಾಡುತ್ತಿವೆ, ಈ ಮೂಲಕ ಸಂಸತ್ತಿನ ವರ್ಚಸ್ಸು ಕುಂದಿಸುತ್ತಿವೆ ಎಂದು ಜೋಶಿ ಆರೋಪಿಸಿದ್ದಾರೆ.

13 ವಿಷಯಗಳನ್ನು ಚರ್ಚೆಗೆ ಎತ್ತಿಕೊಳ್ಳಬೇಕು ಎಂದು ಕಾಂಗ್ರೆಸ್‌ ಮುಖಂಡರು ಸಭೆಯಲ್ಲಿ ಒತ್ತಾಯಿಸಿದ್ದಾರೆ. ದರ ಏರಿಕೆ, ಅಗ್ನಿಪಥ ಯೋಜನೆ, ಒಕ್ಕೂಟ ವ್ಯವಸ್ಥೆಯ ಮೇಲೆ ಪ್ರಹಾರ, ಅನಿಯಂತ್ರಿತ ಹಣದುಬ್ಬರ, ನಿರುದ್ಯೋಗ ಹೆಚ್ಚಳ, ದ್ವೇಷ ಭಾಷಣ, ಕಾಂಗ್ರೆಸ್ ನಾಯಕರ ಮೇಲೆ ಅಪ್ರಜಾಸತ್ತಾತ್ಮಕ ರೀತಿಯ ದಾಳಿ ಕಾಂಗ್ರೆಸ್ ಪ್ರಸ್ತಾಪಿಸಿದ ವಿಚಾರಗಳಲ್ಲಿ ಸೇರಿವೆ.

ಅಲ್ಪಾವಧಿ ಚರ್ಚೆಗಳು, ಗಮನ ಸೆಳೆಯುವ ನಿಲುವಳಿಗಳು, ವಿಶೇಷ ಉಲ್ಲೇಖಗಳಂತಹವುಗಳ ಮೇಲಿನ ಚರ್ಚೆಗೆ ಹೆಚ್ಚಿನ ಸಮಯ ಕೊಡಬೇಕು ಎಂದೂ ಕಾಂಗ್ರೆಸ್‌ ಆಗ್ರಹಿಸಿದೆ. ಸಿಪಿಐ, ಆರ್‌ಎಸ್‌ಪಿ ಇದನ್ನು ಬೆಂಬಲಿಸಿವೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಸಿಂಗಪುರಕ್ಕೆ ತೆರಳಲು ಅನುಮತಿ ನೀಡಿಲ್ಲ ಎಂಬುದನ್ನು ಎಎಪಿ ಸಂಸದರು ಪ್ರಸ್ತಾಪಿಸಿದ್ದಾರೆ.

ಪದ ನಿಷೇಧ ಇಲ್ಲ: ಸರ್ಕಾರದ ಸ್ಪಷ್ಟನೆ

ಇತ್ತೀಚೆಗೆ ವಿವಾದಕ್ಕೆ ಕಾರಣವಾಗಿದ್ದ ‘ಅಸಂಸದೀಯ ಅಭಿವ್ಯಕ್ತಿಗಳು’ ಎಂಬ ಹೊಸ ಕಿರುಹೊತ್ತಗೆಯ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ. ಯಾವುದೇ ಪದವನ್ನು ನಿಷೇಧಿಸಲಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಆದರೆ, ಮಾತನಾಡುವಾಗ ಹೆಚ್ಚಿನ ಎಚ್ಚರ ವಹಿಸಬೇಕು ಎಂದು ಸಂಸದರನ್ನು ಸರ್ಕಾರ ಕೋರಿದೆ. ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರ ಮೇಲೆ ಈ ಕಿರುಹೊತ್ತಗೆಯ ವಿಚಾರದಲ್ಲಿ ಅನಗತ್ಯ ವಾಗ್ದಾಳಿ ನಡೆಸಲಾಗಿದೆ ಎಂದು ಬಿಜೆಡಿಯ ಪಿನಾಕಿ ಮಿಶ್ರಾ ಹೇಳಿದರು.

ಮಹಿಳಾ ಮೀಸಲು ಮಸೂದೆಯನ್ನು ಶೀಘ್ರವೇ ಅಂಗೀಕರಿಸಬೇಕು ಎಂದೂ ಅವರು ಒತ್ತಾಯಿಸಿದರು.

ಪ್ರಧಾನಿ ಮೋದಿ ಗೈರುಹಾಜರಿಗೆ ಆಕ್ಷೇಪ

ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆಗೆ ಹಾಜರಾಗದಿರುವುದಕ್ಕೆ ಕಾಂಗ್ರೆಸ್‌ ಪಕ್ಷವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಸಂಸತ್ತಿನ ಮುಂಬರುವ ಅಧಿವೇಶನದ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ನಡೆದಿದೆ. ಪ್ರಧಾನಿ ಮೋದಿ ಅವರು ಎಂದಿನಂತೆ ಗೈರುಹಾಜರಾಗಿ
ದ್ದಾರೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಟ್ವೀಟ್‌ ಮಾಡಿದ್ದಾರೆ. ‘ಇದು ಅಸಂಸದೀಯ ಅಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ. ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ, ಜೈರಾಮ್‌ ಟ್ವೀಟ್‌ಗೆ ಉತ್ತರ ನೀಡಿದ್ದಾರೆ. ‘2014ಕ್ಕೂ ಮುಂಚೆ ಕಾಂಗ್ರೆಸ್ ಸರ್ಕಾರ ಇದ್ದಾಗ, ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಎಂದೂ ಭಾಗಿಯಾಗಿರಲಿಲ್ಲ’ ಎಂದು ಜೋಶಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.