ಸಾಂದರ್ಭಿಕ ಚಿತ್ರ
ನವದೆಹಲಿ: ಪ್ರಸಕ್ತ ಸಾಲಿನ ನೈರುತ್ಯ ಮುಂಗಾರು ದೇಶದ ವಾಯವ್ಯ ಭಾಗದಲ್ಲಿ ಸೆ. 15ರಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.
ದೇಶಕ್ಕೆ ಮೊದಲ ಮಳೆ ಸುರಿಸುವ ಮಾರುತವು ಜೂನ್ 1ಕ್ಕೆ ಕೇರಳ ಪ್ರವೇಶಿಸಿ, ಜುಲೈ 8ಕ್ಕೆ ಇಡೀ ದೇಶವನ್ನು ವ್ಯಾಪಿಸಿತ್ತು. ಸೆ. 17ಕ್ಕೆ ವಾಯವ್ಯ ಭಾಗದಿಂದ ನೈರುತ್ಯ ಮುಂಗಾರು ಹಿಂದೆ ಸರಿಯಲು ಆರಂಭಿಸಲಿದೆ. ಅ. 15ಕ್ಕೆ ಕೊನೆಗೊಳ್ಳಲಿದೆ’ ಎಂದು ಇಲಾಖೆ ತಿಳಿಸಿದೆ.
‘ಸೆ. 15ರಿಂದ ನೈರುತ್ಯ ಮುಂಗಾರು ಹಿಂದಕ್ಕೆ ಸರಿಯಲು ರಾಜಸ್ಥಾನದ ಪಶ್ಚಿಮದ ಕೆಲ ಭಾಗಗಳಲ್ಲಿನ ಪರಿಸ್ಥಿತಿ ಅನುಕೂಲಕರವಾಗಿದೆ. ಈ ವರ್ಷ ವಾಡಿಕೆಗಿಂತ ಒಂಬತ್ತು ದಿನ ಮೊದಲೇ ಮುಂಗಾರು ಇಡೀ ದೇಶವನ್ನು ಆವರಿಸಿತು. 2020ರಲ್ಲಿ ಜೂನ್ 26ರಂದೇ ಮುಂಗಾರು ಇಡೀ ದೇಶವನ್ನು ಆವರಿಸಿತ್ತು. ಅದಾದ ನಂತರ ವಾಡಿಕೆಗಿಂತ ಮೊದಲು ಮಳೆಯಾಗಿದ್ದು 2025ರಲ್ಲೇ’ ಎಂದು ಇಲಾಖೆ ಹೇಳಿದೆ.
ಮುಂಗಾರು ಋತುವಿನಲ್ಲಿ ಈವರೆಗೂ 83.62 ಸೆಂ.ಮೀ. ಮಳೆಯಾಗಿದ್ದು, ಇದು ವಾಡಿಕೆಗಿಂತ (77.86 ಸೆಂ.ಮೀ.) ಶೇ 7ರಷ್ಟು ಅಧಿಕವಾಗಿದೆ. ಜೂನ್‌ನಿಂದ ಸೆಪ್ಟೆಂಬರವವರೆಗೂ ಮಾನ್ಸೂನ್ ಆರಂಭಕ್ಕೂ ಮೊದಲು ಮೇನಲ್ಲಿ ಮಳೆಯ ಮುನ್ಸೂಚನೆ ನೀಡಿದ್ದ ಹವಾಮಾನ ಇಲಾಖೆಯು, 2025ರಲ್ಲಿ ದೀರ್ಘಾವಧಿಯ ಸರಾಸರಿ 87 ಸೆಂ.ಮೀ. (ಶೇ 16ರಷ್ಟು ಅಧಿಕ) ಮಳೆಯಾಗಲಿದೆ ಎಂದಿತ್ತು.
50 ವರ್ಷಗಳ ಸರಾಸರಿ ಮಳೆಯ ಪ್ರಮಾಣವನ್ನು ಆಧರಿಸಿ ಶೇ 90ರಿಂದ ಶೇ 104ರಷ್ಟು ಮಳೆಯನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ದೇಶದ ಕೃಷಿ ವಲಯಕ್ಕೆ ಮಾನ್ಸೂನ್ ನಿರ್ಣಾಯಕವಾಗಿದ್ದು, ಇದು ಸುಮಾರು ಶೇ 42ರಷ್ಟು ಜನರ ಜೀವನೋಪಾಯದ ಆಧಾರವಾಗಿದೆ. ಜತೆಗೆ ದೇಶದ ಜಿಡಿಪಿಗೆ ಶೇ 18.2ರಷ್ಟು ಕೊಡುಗೆ ನೀಡುತ್ತದೆ.
ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಅಗತ್ಯವಾದ ಜಲಾಶಯಗಳನ್ನು ಮರುಪೂರಣಗೊಳಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.