ADVERTISEMENT

ನನ್ನ ನಾಲ್ವರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳಿ...: ಹರಿದಾಡಿದ BLO ಕೊನೆಯ ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2025, 16:21 IST
Last Updated 1 ಡಿಸೆಂಬರ್ 2025, 16:21 IST
   

ಮೊರಾದಾಬಾದ್(ಉತ್ತರ ಪ್ರದೇಶ): ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬೂತ್‌ ಮಟ್ಟದ ಅಧಿಕಾರಿ ಸರ್ವೇಶ್‌ ಕುಮಾರ್(46) ಅವರ ಮೃತದೇಹ ಭಾನುವಾರ ಬೆಳಿಗ್ಗೆ ಅವರ ಮನೆಯಲ್ಲಿ ಪತ್ತೆಯಾಗಿತ್ತು.

ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿರುವುದಾಗಿ ತಮ್ಮ ಕೊನೆಯ ವಿಡಿಯೊದಲ್ಲಿ ಅವರು ಹೇಳಿದ್ದಾರೆ.

ಸರ್ವೇಶ್ ಕುಮಾರ್ ಅವರು ಕೊನೆಯದಾಗಿ ಮಾಡಿದ ವಿಡಿಯೊ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತನ್ನ ನಾಲ್ವರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವಂತೆ ಅವರು ವಿಡಿಯೊದಲ್ಲಿ ಗೋಗರೆದಿದ್ದಾರೆ.

ADVERTISEMENT

‘ಅಮ್ಮಾ, ಅಕ್ಕ..... ದಯವಿಟ್ಟು ನನ್ನನ್ನು ಕ್ಷಮಿಸಿ, ನನ್ನ ಮಕ್ಕಳನ್ನು ನೋಡಿಕೊಳ್ಳಿ. ನನಗೆ ವಹಿಸಿರುವ ಕೆಲಸ ನಿರ್ವಹಿಸಲಾಗದೇ ಸೋತಿದ್ದೇನೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ. ಕಳೆದ 20 ದಿನಗಳಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಹೆಚ್ಚು ಸಮಯ ನೀಡಿದ್ದರೆ ವಹಿಸಿದ ಕೆಲಸವನ್ನು ಮಾಡುತ್ತಿದ್ದೆ’ ಎಂದು ತಮ್ಮ ಅಸಹಾಯಕತೆಯನ್ನು ಬಿಚ್ಚಿಟ್ಟಿದ್ದಾರೆ.

‘ನನ್ನ ನಾಲ್ವರು ಪುಟ್ಟ ಹೆಣ್ಣು ಮಕ್ಕಳನ್ನು ನೋಡಿಕೊಳ್ಳಿ. ನಾನು ನಿಮ್ಮ ಪ್ರಪಂಚದಿಂದ ದೂರ ಹೋಗುತ್ತಿದ್ದೇನೆ. ನನಗೆ ಬದುಕಲು ಆಸೆ ಇದೆ, ಆದರೆ ಈ ಒತ್ತಡದಲ್ಲಿ ಅದು ಸಾಧ್ಯವಿಲ್ಲ’ ಎಂದು ಕಣ್ಣೀರಿಟ್ಟಿದ್ದಾರೆ.

ಎಸ್‌ಐಆರ್‌ ವೇಳೆ ಅತಿಯಾದ ಒತ್ತಡಕ್ಕೆ ಒಳಗಾಗಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶದಲ್ಲಿ ಹಲವರು ಮೃತಪಟ್ಟಿರುವುದು ಇತ್ತೀಚೆಗೆ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.