ADVERTISEMENT

ಒಡಿಶಾ: ಈ ವರ್ಷ ಚಿಲ್ಕಾ ಸರೋವರಕ್ಕೆ 11.42 ಲಕ್ಷ ಹಕ್ಕಿಗಳ ಭೇಟಿ

’ಆರೋಗ್ಯಪೂರ್ಣ ವಾತಾವರಣ ಪಕ್ಷಿ ಸಂಖ್ಯೆ ಹೆಚ್ಚಲು ಕಾರಣ‘

ಪಿಟಿಐ
Published 6 ಜನವರಿ 2021, 9:02 IST
Last Updated 6 ಜನವರಿ 2021, 9:02 IST
ಚಿಲ್ಕಾ ಸರೋವರದಲ್ಲಿ ಪಕ್ಷಿಗಳು (ಸಂಗ್ರಹ ಚಿತ್ರ)
ಚಿಲ್ಕಾ ಸರೋವರದಲ್ಲಿ ಪಕ್ಷಿಗಳು (ಸಂಗ್ರಹ ಚಿತ್ರ)   

ಭುವನೇಶ್ವರ: ‘ಏಷ್ಯಾದ ಅತಿ ದೊಡ್ಡದಾದ ಉಪ್ಪು ನೀರಿನ ಸರೋವರವಾದ ಒಡಿಶಾದ ಚಿಲ್ಕಾಗೆ ಈ ವರ್ಷ 190 ಜಾತಿಗಳ 11.42 ಲಕ್ಷಕ್ಕೂ ಹೆಚ್ಚು ಪಕ್ಷಿಗಳು ಭೇಟಿ ನೀಡಿವೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ನಡೆಸಿದ ಪಕ್ಷಿ‌ ಗಣತಿಯ ಪ್ರಕಾರ, ಕಳೆದ ವರ್ಷ ಸರೋವರದ ನಡುಗಡ್ಡೆಗೆ 11.04 ಲಕ್ಷ ಪಕ್ಷಿಗಳು ಬಂದಿದ್ದವು. ಈ ವರ್ಷ 11.42 ಲಕ್ಷಕ್ಕೂ ಹೆಚ್ಚು ಪಕ್ಷಿಗಳು ಭೇಟಿ ನೀಡಿವೆ.

‘2018-2019ರ ಅವಧಿಯಲ್ಲಿ ಚಿಲ್ಕಾ ಸರೋವರದ ಸುತ್ತ ಅತಿಕ್ರಮವಾಗಿದ್ದ 160 ಚ. ಕಿ.ಮೀ ಪ್ರದೇಶವನ್ನು ತೆರವುಗೊಳಿಸಲಾಗಿತ್ತು. ಹೀಗಾಗಿ ಈ ವರ್ಷ ಹೆಚ್ಚು ಸಂಖ್ಯೆ ಪಕ್ಷಿಗಳು ವಲಸೆ ಬರಲು ಕಾರಣವಾಗಿದೆ‘ ಎಂದು ಚಿಲ್ಕಾ ಅಭಿವೃದ್ಧಿ ಪ್ರಾಧಿಕಾರ (ಸಿಡಿಎ) ಮುಖ್ಯ ಕಾರ್ಯನಿರ್ವಾಹಕ ಸುಸಂತಾ ನಂದಾ ಹೇಳಿದರು.

ADVERTISEMENT

ಹೆಚ್ಚು ಪ್ರಭೇದದ ಪಕ್ಷಿಗಳು ವಲಸೆ ಬಂದಿರುವುದು, ಈ ಭಾಗದಲ್ಲಿ ಜೌಗು ಪ್ರದೇಶಗಳಲ್ಲಿರುವ ಪರಿಸರ ವ್ಯವಸ್ಥೆ ಆರೋಗ್ಯವಾಗಿದೆ ಎಂಬುದರ ಸೂಚಕ ಎಂದು ಅವರು ಹೇಳಿದರು.

‘ಜೌಗು ಪ್ರದೇಶದಲ್ಲಿರುವ ವ್ಯವಸ್ಥೆಗಳು ಸುಧಾರಿಸುತ್ತಿವೆ. ಕಡಿಮೆ ಸಮಯದಲ್ಲಿ ಸಾಮಾನ್ಯ ಸ್ಥಿತಿಗೆ ಮರಳಿವೆ. ಹೀಗಾಗಿ ಚಿಲ್ಕಾ ಸರೋವರ ವಲಸೆ ಹಕ್ಕಿಗಳಿಗೆ ಸುರಕ್ಷಿತ ತಾಣವಾಗಿದೆ‘ ಎಂದು ಅವರು ಅಭಿಪ್ರಾಯಪಟ್ಟರು.

ಕಳೆದ ವರ್ಷ 184 ಪಕ್ಷಿ ಪ್ರಭೇದಗಳು ಇಲ್ಲಿಗೆ ಬಂದಿದ್ದವು. ಈ ವರ್ಷ ಅವುಗಳ ಸಂಖ್ಯೆ 190ಕ್ಕೆ ಏರಿದೆ. ಇದು ಇಲ್ಲಿವರೆಗೂ ಚಿಲ್ಕಾ ಸರೋವರಕ್ಕೆ ವಲಸೆ ಬಂದಿರುವ ಅತಿ ಹೆಚ್ಚು ಪ್ರಭೇದಗಳ ಪಕ್ಷಿಗಳಾಗಿವೆ‌ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.