ADVERTISEMENT

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಹೆಚ್ಚು ಲಸಿಕೆ

ಪ್ರಧಾನಿ ಮೋದಿ ಜನ್ಮದಿನದಂದು ದಾಖಲೆ ಮಟ್ಟದಲ್ಲಿ ಲಸಿಕೆ ನೀಡಿಕೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 18:06 IST
Last Updated 18 ಸೆಪ್ಟೆಂಬರ್ 2021, 18:06 IST
.
.   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಶುಕ್ರವಾರ ಒಂದೇ ದಿನ 2.5 ಕೋಟಿ ಡೋಸ್‌ನಷ್ಟು ಕೋವಿಡ್‌ ಲಸಿಕೆ ನೀಡಿ ದೇಶವು ದಾಖಲೆ ನಿರ್ಮಿಸಿದೆ. ಆದರೆ ಇದರಲ್ಲಿ ಶೇ 55ರಷ್ಟು ಡೋಸ್‌ಗಳನ್ನು ಬಿಜೆಪಿ ಮತ್ತು ಬಿಜೆಪಿ ಮಿತ್ರಪಕ್ಷ ಆಳ್ವಿಕೆ ಇರುವ ರಾಜ್ಯಗಳಲ್ಲಿ ನೀಡಲಾಗಿದೆ.

ಶುಕ್ರವಾರ 2.51 ಕೋಟಿ ಡೋಸ್‌ ಲಸಿಕೆ ನೀಡಿದ್ದರೆ, ಶನಿವಾರ ಈ ಸಂಖ್ಯೆ 81 ಲಕ್ಷಕ್ಕೆ ಕುಸಿದಿದೆ.ಬಿಜೆಪಿ ಆಳ್ವಿಕೆ ಇರುವ ಗುಜರಾತ್‌, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳು ಸಹ ಶುಕ್ರವಾರ ಹಲವು ಪಟ್ಟು ಹೆಚ್ಚು ಲಸಿಕೆ ನೀಡಿವೆ. ಬಿಜೆಪಿ ಮಿತ್ರಪಕ್ಷ ಜೆಡಿಯು ಆಳ್ವಿಕೆ ಇರುವ ಬಿಹಾರವೂ ಶುಕ್ರವಾರ ಹಲವು ಪಟ್ಟು ಹೆಚ್ಚು ಲಸಿಕೆ ನೀಡಿವೆ.

ಈ ಎಲ್ಲಾ ರಾಜ್ಯಗಳುಸೆಪ್ಟೆಂಬರ್‌ 10-16ರಅವಧಿಯಲ್ಲಿ ಪ್ರತಿದಿನ ನೀಡಿದ್ದಕ್ಕಿಂತ, ಶುಕ್ರವಾರ ಹಲವುಪಟ್ಟು ಹೆಚ್ಚು ಡೋಸ್‌ ಲಸಿಕೆ ನೀಡಿವೆ.

ಈ ಅವಧಿಯಲ್ಲಿಕರ್ನಾಟಕವು ಪ್ರತಿದಿನ ಸರಾಸರಿ 2 ಲಕ್ಷ ಡೋಸ್ ಲಸಿಕೆ ನೀಡಿತ್ತು. ಆದರೆ ಶುಕ್ರವಾರ 31 ಲಕ್ಷ ಡೋಸ್‌ ಲಸಿಕೆ ನೀಡಿದೆ. ಇದು ಹಿಂದಿನ ವಾರದ ಸರಾಸರಿಗಿಂತ 15ಪಟ್ಟು ಹೆಚ್ಚು. ಇಡೀ ದೇಶದಲ್ಲಿ ನೀಡಿದ ಒಟ್ಟು ಲಸಿಕೆಯಲ್ಲಿ ಶೇ 11ರಷ್ಟನ್ನು ರಾಜ್ಯದಲ್ಲಿ ನೀಡಲಾಗಿದೆ. ಮೋದಿ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು, ರಾಜ್ಯದಲ್ಲಿ ಒಂದೇ ದಿನ 30 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಶನಿವಾರ ತಿಳಿಸಿದ್ದಾರೆ.

ಏಳುದಿನಗಳ ಸರಾಸರಿಗೆ ಹೋಲಿಸಿದರೆ ಗುಜರಾತ್ ರಾಜ್ಯದಲ್ಲಿ ಶುಕ್ರವಾರ 8 ಪಟ್ಟು ಹೆಚ್ಚು ಲಸಿಕೆ ನೀಡಲಾಗಿದೆ. ಮಧ್ಯಪ್ರದೇಶದಲ್ಲಿ 6.5 ಪಟ್ಟು ಹೆಚ್ಚು, ಬಿಹಾರದಲ್ಲಿ 5 ಪಟ್ಟು ಹೆಚ್ಚು, ಅಸ್ಸಾಂನಲ್ಲಿ 4 ಪಟ್ಟು ಹೆಚ್ಚು ಮತ್ತು ಉತ್ತರ ಪ್ರದೇಶದಲ್ಲಿ 3.5ಪಟ್ಟು ಹೆಚ್ಚು ಲಸಿಕೆ ನೀಡಲಾಗಿದೆ.

ಅದೇ ದಿನರಾಜಸ್ಥಾನದಲ್ಲಿ 2.5 ಪಟ್ಟು ಹೆಚ್ಚು, ಮಹಾರಾಷ್ಟ್ರದಲ್ಲಿ 2.2ಪಟ್ಟು ಹೆಚ್ಚು, ದೆಹಲಿಯಲ್ಲಿ 1.2 ಪಟ್ಟು ಹೆಚ್ಚು ಮತ್ತು ಕೇರಳದಲ್ಲಿ 1.3 ಪಟ್ಟು ಹೆಚ್ಚು ಲಸಿಕೆ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ದಾಖಲೆ ನಿರ್ಮಿಸುವ ಉದ್ದೇಶದಿಂದ, ಬಿಜೆಪಿ ಆಡಳಿತವಿರುವ ರಾಜ್ಯಗಳು ಹಿಂದಿನ ವಾರದಲ್ಲಿ ಕಡಿಮೆ ಡೋಸ್‌ ಲಸಿಕೆ ನೀಡಿವೆ. ಆ ಎಲ್ಲಾ ಡೋಸ್‌ಗಳನ್ನು ಮೋದಿ ಅವರ ಜನ್ಮದಿನದಂದು ನೀಡಿ ದಾಖಲೆ ನಿರ್ಮಿಸಲಾಗಿದೆ ಎಂದು ವಿರೋಧ ಪಕ್ಷಗಳು ಮತ್ತು ತಜ್ಞರು ಟೀಕಿಸಿದ್ದಾರೆ.

***

ಪ್ರಧಾನಿ ಮೋದಿ ಅವರು ಪದೇ ಪದೇ ತಮ್ಮ ಜನ್ಮದಿನ ಆಚರಿಸಿಕೊಳ್ಳಲಿ. ಆಗ ಭಾರತೀಯರೆಲ್ಲರಿಗೂ ಅತ್ಯಂತ ಕಡಿಮೆ ಅವಧಿಯಲ್ಲಿ ಲಸಿಕೆ ನೀಡಲು ಸಾಧ್ಯವಾಗುತ್ತದೆ

ರಿಜೊ ಜಾನ್, ಕೋಯಿಕ್ಕೋಡ್ ಐಐಎಂ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.