ADVERTISEMENT

ಮಧ್ಯಪ್ರದೇಶ: ದಲಿತ ವ್ಯಕ್ತಿ ಮೇಲೆ ಮಲ ಎಸೆತ

ಪಿಟಿಐ
Published 23 ಜುಲೈ 2023, 14:52 IST
Last Updated 23 ಜುಲೈ 2023, 14:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಛತ್ತರ್‌ಪುರ : ಗ್ರೀಸ್‌ ಹತ್ತಿದ್ದ ಕೈಯಿಂದ ಆಕಸ್ಮಿಕವಾಗಿ ಸ್ಪರ್ಶಿಸಿದ್ದಕ್ಕಾಗಿ ದಲಿತ ವ್ಯಕ್ತಿಯ ಮುಖ ಮತ್ತು ಮೈಮೇಲೆ ಮಲ ಎಸೆದಿರುವ ಅಮಾನುಷ ಕೃತ್ಯ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಈ ಸಂಬಂಧ ಸಂತ್ರಸ್ತ ದಶರಥ ಅಹಿರ್‌ವಾರ್‌ ಅವರು ಶನಿವಾರ ಪೊಲೀಸರಿಗೆ ದೂರು ನೀಡಿದ್ದು, ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದ ಆರೋಪಿ ರಾಮ್‌ಕೃಪಾಲ್‌ ಪಟೇಲ್‌ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಶುಕ್ರವಾರ ಜಿಲ್ಲೆಯ ಬಿಕೌರ ಗ್ರಾಮದಲ್ಲಿ ಚರಂಡಿ ಸ್ವಚ್ಛ ಮಾಡುತ್ತಿದ್ದೆ.  ಹತ್ತಿರದ ಹ್ಯಾಂಡ್‌ ಪಂಪ್‌ನಲ್ಲಿ ಪಟೇಲ್‌ ಸ್ನಾನ ಮಾಡುತ್ತಿದ್ದರು. ಗ್ರೀಸ್ ಹತ್ತಿದ್ದ ಕೈನಿಂದ ಆಕಸ್ಮಿಕವಾಗಿ ಪಟೇಲ್ ಅವರನ್ನು ಮುಟ್ಟಿದೆ. ಸಿಟ್ಟಾದ ಪಟೇಲ್ ಹತ್ತಿರದಲ್ಲೇ ಬಿದ್ದಿದ್ದ ಮಲವನ್ನು ಚೊಂಬಿನಲ್ಲಿ ತಂದು ಮುಖ ಮತ್ತು ಮೈಮೇಲೆ ಸುರಿದರು’ ಎಂದು ಸಂತ್ರಸ್ತ ದಶರಥ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ಅಷ್ಟೇ ಅಲ್ಲದೆ, ‘ಪಟೇಲ್‌ ಜಾತಿ ಆಧಾರಿತವಾಗಿ ನಿಂದಿಸಿದರು. ಈ ವಿಷಯವಾಗಿ ಶುಕ್ರವಾರ ಪಂಚಾಯಿತಿ ಕರೆದು ದೂರು ನೀಡಿದೆ. ಆದರೆ ಪಂಚಾಯಿತಿಯಲ್ಲಿ ಹಿರಿಯರು ನನಗೇ ₹600 ದಂಡ ವಿಧಿಸಿದರು’ ಎಂದು ಆರೋಪಿಸಿದ್ದಾರೆ.

‘ರಾಮ್‌ಕೃಪಾಲ್‌ ಪಟೇಲ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಮಹಮ್ಮದ್‌ ಸಿಂಗ್‌ ಬಘೇಲ್‌ ತಿಳಿಸಿದ್ದಾರೆ.

‘ದಶರಥ ಅವರು ಇತರರೊಂದಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಸಮೀಪದಲ್ಲೇ ಸ್ನಾನ ಮಾಡುತ್ತಿದ್ದ ಪಟೇಲ್ ಅವರನ್ನು ಕಂಡು ತಮಾಷೆ ಮಾಡಿದ್ದಾರೆ. ಸಣ್ಣ ಪುಟ್ಟ ವಸ್ತುಗಳನ್ನು ಪರಸ್ಪರ ಎಸೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ದಶರಥ ಅವರು ಪಟೇಲ್‌ ಕೈಗೆ ಗ್ರೀಸ್‌ ಹಚ್ಚಿದ್ದಾರೆ. ನಂತರ ಪಟೇಲ್‌, ಅಲ್ಲೇ ಬಿದ್ದಿದ್ದ ಮಲವನ್ನು ಕೈಯಲ್ಲಿ ಬಾಚಿ ತಂದು ದಶರಥ ಅವರ ಮೇಲೆ ಎಸೆದಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.