ADVERTISEMENT

ಗೋಳವಲಕರ್‌ ಹೇಳಿಕೆ ಉಲ್ಲೇಖಿಸಿ ಟ್ವೀಟ್‌; ದಿಗ್ವಿಜಯ್‌ ಸಿಂಗ್ ವಿರುದ್ಧ FIR ದಾಖಲು

​ಪ್ರಜಾವಾಣಿ ವಾರ್ತೆ
Published 9 ಜುಲೈ 2023, 16:09 IST
Last Updated 9 ಜುಲೈ 2023, 16:09 IST
ದಿಗ್ವಿಜಯ್‌ ಸಿಂಗ್
ದಿಗ್ವಿಜಯ್‌ ಸಿಂಗ್   

ಭೋಪಾಲ್/ಇಂದೋರ್ : ಆರ್‌ಎಸ್‌ಎಸ್‌ನ ಮಾಜಿ ಮುಖ್ಯಸ್ಥ ಎಂ.ಎಸ್‌. ಗೋಳವಲಕರ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್‌ ಹಂಚಿಕೊಂಡ ಆರೋಪದ ಮೇಲೆ ಮಧ್ಯಪ್ರದೇಶದ ಕಾಂಗ್ರೆಸ್‌ ನಾಯಕ ದಿಗ್ವಿಜಯ್ ಸಿಂಗ್‌ ವಿರುದ್ಧ ಭಾನುವಾರ ಎಫ್‌ಐಆರ್‌ ದಾಖಲಾಗಿದೆ. 

ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜೇಶ್‌ ಜೋಷಿ ಎಂಬುವರು ಈ ದೂರು ನೀಡಿದ್ದಾರೆ. ಇದರನ್ವಯ ಐಪಿಸಿ ಸೆಕ್ಷನ್‌ 153ಎ (ಧಾರ್ಮಿಕ, ಜನಾಂಗೀಯ, ಹುಟ್ಟಿದ ಸ್ಥಳ, ಭಾಷೆಯ ಹಿನ್ನೆಲೆಯಲ್ಲಿ ಭಿನ್ನ ಗುಂಪುಗಳ ನಡುವಣ ದ್ವೇಷ ಹರಡುವುದು), 469 (ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶ), 500 (ಮಾನಹಾನಿ) ಹಾಗೂ 505ರ (ಜನರನ್ನು ದಾರಿ ತಪ್ಪಿಸುವ ಉದ್ದೇಶ) ಅಡಿ ಪ್ರಕರಣ ದಾಖಲಿಸಲಾಗಿದೆ.

‘ಸುಳ್ಳು ಪೋಸ್ಟ್‌ನ ಮೂಲಕ ದಲಿತರು, ಹಿಂದುಳಿದವರು, ಮುಸ್ಲಿಮರ ನಡುವೆ ಸಂಘರ್ಷ ಸೃಷ್ಟಿಸಲು ಯತ್ನಿಸಲಾಗುತ್ತಿದೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ADVERTISEMENT

ಪೋಸ್ಟ್‌ನಲ್ಲಿ ಏನಿದೆ?: 

‘ದಲಿತರು, ಹಿಂದುಳಿದ ವರ್ಗದವರು ಮತ್ತು ಮುಸ್ಲಿಂ ಸಮುದಾಯಕ್ಕೆ ಸಮಾನ ಹಕ್ಕುಗಳನ್ನು ನೀಡಿದರೆ ನಾನು ಬ್ರಿಟಿಷರ ಆಡಳಿತದಲ್ಲಿಯೇ ಬದುಕಲು ಇಚ್ಛಿಸುತ್ತೇನೆ’ ಎಂದು ಗೋಳವಲಕರ್ ಹೇಳಿದ್ದಾರೆ ಎನ್ನಲಾದ ಹೇಳಿಕೆಯನ್ನು ದಿಗ್ವಿಜಯ್ ಸಿಂಗ್‌ ಟ್ವೀಟ್‌ ಮಾಡಿದ್ದರು.

ಮುಖ್ಯಮಂತ್ರಿ ಖಂಡನೆ: ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್‌ ಚೌಹಾಣ್‌, ‘ಗೋಳವಲಕರ್ ಬಗ್ಗೆ ಸುಳ್ಳು ಸಂದೇಶ ಹರಡಿ ಸಮಾಜದಲ್ಲಿ ದ್ವೇಷದ ವಾತಾವರಣ ಸೃಷ್ಟಿಸಲು ಕಾಂಗ್ರೆಸ್‌ ನಾಯಕ ಹುನ್ನಾರ ನಡೆಸಿದ್ದಾರೆ’ ಎಂದು ಟೀಕಿಸಿದ್ದಾರೆ.

ಇಂದೋರ್‌ ಪೊಲೀಸ್‌ ಆಯುಕ್ತ ಮಕರಂದ್ ದೇವುಸ್ಕರ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಗೋಳವಲಕರ್ ಬಗ್ಗೆ ಅವಮಾನಕರವಾಗಿ ಪೋಸ್ಟ್‌ ಹಂಚಿಕೊಳ್ಳಲಾಗಿದೆ ಎಂಬ ದೂರಿನ ಮೇರೆಗೆ ದಿಗ್ವಿಜಯ್ ಸಿಂಗ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.