ADVERTISEMENT

ಮಧ್ಯಪ್ರದೇಶ: ವಲಸೆ ಕಾರ್ಮಿಕರಿಗೆ ಉದ್ಯೋಗ ಮೇಳ

ಪಿಟಿಐ
Published 13 ಜೂನ್ 2020, 6:01 IST
Last Updated 13 ಜೂನ್ 2020, 6:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೂಪಾಲ್‌: ಕೋವಿಡ್‌ನ ಲಾಕ್‌ಡೌನ್‌ ಅವಧಿಯಲ್ಲಿ ಕೆಲಸ ಕಳೆದುಕೊಂಡು, ವಿವಿಧ ರಾಜ್ಯಗಳಿಂದ ಮನೆಗೆ ಮರಳಿರುವ ವಲಸೆ ಕಾರ್ಮಿಕರು ಹಾಗೂ ರಾಜ್ಯದಲ್ಲಿರುವ ಇತರ ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸಲು ರಾಜ್ಯದಾದ್ಯಂತ ಉದ್ಯೋಗ ಮೇಳಗಳನ್ನು ಆಯೋಜಿಸಲು ಮಧ್ಯ ಪ್ರದೇಶ ಸರ್ಕಾರ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾರ್ವಜನಿಕ ಸಂಪರ್ಕ ಇಲಾಖೆಯು ರಾಜ್ಯದಾದ್ಯಂತ ಇಂಥ ಉದ್ಯೋಗ ಮೇಳಗಳನ್ನು ಜೂನ್ 3ನೇ ವಾರದಿಂದ ಆಯೋಜಿಸಲಿದೆ ಎಂದು ಅವರು ವಿವರಿಸಿದ್ದಾರೆ.

ಉದ್ಯೋಗಕ್ಕಾಗಿ ಹೆಸರು ನೋಂದಾಯಿಸಿರುವ ಕಾರ್ಮಿಕರುಗಳನ್ನು ವಿವಿಧ ಕಾರ್ಖಾನೆಗಳ ಮಾಲೀಕರು, ಗುತ್ತಿಗೆದಾರರು, ಬಿಲ್ಡರ್‌ಗಳು ಮತ್ತು ಉದ್ಯೋಗ ದೊರಕಿಸುವ ವಿವಿಧ ಏಜೆನ್ಸಿಗಳ ಪ್ರತಿನಿಧಿಗಳ ಜತೆಗೆ ಸಂದರ್ಶನಕ್ಕೆ ಅವಕಾಶವನ್ನು ಈ ಮೇಳಗಳಲ್ಲಿ ಒದಗಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಮೇಳಗಳಿಗೆ ಕಾರ್ಮಿಕರನ್ನು ಅವರ ಮನೆಗಳಿಂದ ಕರೆತರುವ ಮತ್ತು ಮರಳಿ ಮನೆಗೆ ಬಿಡುವ ವ್ಯವಸ್ಥೆಯನ್ನು ಸರ್ಕಾರವೇ ಮಾಡಲಿದೆ. ಮೇಳದಲ್ಲಿ ಅವರಿಗೆ ಆಹಾರ, ನೀರಿನ ಸೌಕರ್ಯ ಕಲ್ಪಿಸಲಾಗುತ್ತದೆ. ಅಲ್ಲದೆ, ಪರಸ್ಪರ ಅಂತರ ಕಾಯ್ದುಕೊಳ್ಳುವುದರ ಜತೆಗೆ ಸೋಂಕು ನಿಯಂತ್ರಣಕ್ಕೆ ಇರುವ ಮಾರ್ಗಸೂಚಿಗಳ ಪಾಲನೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಇಂಥ ಮೇಳಗಳನ್ನು ಆಯೋಜಿಸಲು ಉದ್ದೇಶಿಸಿದ್ದು, ಸಂಬಂಧಿಸಿದ ಜಿಲ್ಲೆಯ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅವುಗಳು ಜರುಗುತ್ತವೆ ಎಂದು ಅವರು ತಿಳಿಸಿದ್ದಾರೆ.

ಮೂರು ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾನ್‌ ಅವರು ‘ರೋಜ್ಗಾರ್‌ ಸೇತು’ ಪೋರ್ಟಲ್‌ಗೆ ಚಾಲನೆ ನೀಡಿದ್ದರು. ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡ 302 ವಲಸೆ ಕಾರ್ಮಿಕರು ಈಗಾಗಲೇ ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಈ ಪೋರ್ಟಲ್‌ನಲ್ಲಿ ಸುಮಾರು 10 ಸಾವಿರ ಉದ್ಯೋಗದಾತ ಸಂಸ್ಥೆಗಳು ಹೆಸರು ನೋಂದಾಯಿಸಿಕೊಂಡಿವೆ. ಅವುಗಳಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಸಚಿವಾಲಯ ಸೇರಿದಂತೆ ವಿವಿಧ ಕಾರ್ಖಾನೆಗಳು, ವಾಣಿಜ್ಯ ಸಂಸ್ಥೆಗಳು, ಗುತ್ತಿಗೆದಾರರು, ಬಿಲ್ಡರ್‌ಗಳು, ಉದ್ಯೋಗ ಕಲ್ಪಿಸುವ ಏಜೆನ್ಸಿಗಳೂ ಸೇರಿವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.