ADVERTISEMENT

ಕಳ್ಳಭಟ್ಟಿ ದುರಂತ: ಮೃತರ ಸಂಖ್ಯೆ 20ಕ್ಕೆ ಏರಿಕೆ

ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ ವಜಾಗೊಳಿಸಿ ಮುಖ್ಯಮಂತ್ರಿ

ಪಿಟಿಐ
Published 13 ಜನವರಿ 2021, 16:49 IST
Last Updated 13 ಜನವರಿ 2021, 16:49 IST
ಶಿವರಾಜ್‌ ಸಿಂಗ್‌ ಚೌಹಾಣ್‌
ಶಿವರಾಜ್‌ ಸಿಂಗ್‌ ಚೌಹಾಣ್‌   

ಭೋಪಾಲ್‌/ಮೊರೆನಾ: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಕಳ್ಳಭಟ್ಟಿ ದುರಂತದಲ್ಲಿ ಬುಧವಾರ ಆರು ಜನ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ(ಎಸ್‌ಪಿ)ಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ.

ಘಟನೆಯ ಕುರಿತು ಬುಧವಾರ ಸಭೆ ನಡೆಸಿದ ಚೌಹಾಣ್‌, ಉನ್ನತ ಮಟ್ಟದ ತನಿಖೆಗೂ ಇದೇ ವೇಳೆ ಆದೇಶಿಸಿದ್ದಾರೆ. ಗೃಹ ಇಲಾಖೆಯಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಶ್‌ ರಜೋರ ಅವರ ನೇತೃತ್ವದಲ್ಲಿ ಮೂರು ಸದಸ್ಯರಿರುವ ಸಮಿತಿಯನ್ನು ತನಿಖೆಗಾಗಿ ರಚಿಸಲಾಗಿದೆ. ಸಮಿತಿಯಲ್ಲಿ ಸಿಐಡಿಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಎ.ಸಾಯಿ ಮನೋಹರ್‌, ಡಿಐಜಿ ಮಿತಿಲೇಷ್‌ ಶುಕ್ಲಾ ಇದ್ದಾರೆ. ಮೊರೆನಾ ಹಾಗೂ ಗ್ವಾಲಿಯರ್‌ನಲ್ಲಿ ಪ್ರಸ್ತುತ 21 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಮೃತಪಟ್ಟವರೆಲ್ಲರೂ ಹೆಚ್ಚಿನ ಪ್ರಮಾಣದ ಮದ್ಯ ಸೇವಿಸಿದ್ದರು. ಇದರಿಂದಾಗಿ ಅವರ ದೇಹದೊಳಗಿನ ಅಂಗಗಳಿಗೆ ಹಾನಿಯಾಗಿತ್ತು ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ’ ಎಂದು ವೈದ್ಯಕೀಯ ಅಧಿಕಾರಿಯೊಬ್ಬರು ಹೇಳಿದರು. ಪ್ರಾಥಮಿಕ ಮಾಹಿತಿಯಂತೆ, ಮನ್ಪುರ್‌ ಹಾಗೂ ಪಹವಾಲಿ ಹಳ್ಳಿಯ ಕೆಲ ನಿವಾಸಿಗಳು ಸೋಮವಾರ ರಾತ್ರಿ ಬಿಳಿ ಬಣ್ಣದ ಮದ್ಯವನ್ನು ಕುಡಿದಿದ್ದರು. ನಂತರದಲ್ಲಿ ಹತ್ತಿರದ ಕೆಲ ಹಳ್ಳಿಯ ಜನರೂ ಮದ್ಯ ಸೇವಿಸಿದ ಬಳಿಕ ಅನಾರೋಗ್ಯಕ್ಕೆ ಈಡಾಗಿದ್ದರು ಎಂದು ಪೊಲೀಸರು ತಿಳಿಸಿದರು.

ADVERTISEMENT

ಘಟನೆಗೆ ಸಂಬಂಧಿಸಿದತೆ ಏಳು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ವರದಿಯು ಮದ್ಯದಲ್ಲಿದ್ದ ವಿಷಕಾರಿ ಅಂಶದ ಬಗ್ಗೆ ನಿಖರ ಮಾಹಿತಿ ನೀಡಲಿದೆ ಎಂದು ಮೊರೆನಾ ಜಿಲ್ಲೆಯ ಆರೋಗ್ಯಾಧಿಕಾರಿ ಡಾ.ಆರ್‌.ಸಿ.ಬಂಡಿಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.