ADVERTISEMENT

ಆ್ಯಸಿಡ್‌ ಕುಡಿಸಿ ಮಹಿಳೆಯ ಕೊಲೆಗೆ ಯತ್ನ; ಗಂಡನ ಮನೆಯವರ ವಿರುದ್ಧ ಪ್ರಕರಣ ದಾಖಲು

ಪಿಟಿಐ
Published 21 ಜುಲೈ 2021, 9:52 IST
Last Updated 21 ಜುಲೈ 2021, 9:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗ್ವಾಲಿಯರ್‌: ‘ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಹಿಳೆಯೊಬ್ಬರ ಹತ್ಯೆಗೆ ಯತ್ನಿಸಿದ ಆರೋಪದಡಿ ಆಕೆಯ ಗಂಡನ ಮನೆಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.

‘ವರದಕ್ಷಿಣೆ ಬೇಡಿಕೆಯಿಟ್ಟ ಗಂಡನ ಮನೆಯವರು ಸಂತ್ರಸ್ತೆಗೆ ಬಲವಂತವಾಗಿ ಆ್ಯಸಿಡ್‌ ಕುಡಿಸಿದ್ದಾರೆ’ ಎಂದು ಅವರು ಹೇಳಿದರು.

ಈ ಸಂಬಂಧ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಪತ್ರ ಬರೆದಿದ್ದು, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಈ ಸಂಬಂಧ ಜೂನ್‌ 28ರಂದು ದಬ್ರಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ‘ತನ್ನ ಮಗಳಿಗೆ ಆಕೆಯ ಗಂಡನ ಮನೆಯವರು ಬಲವಂತವಾಗಿ ಆ್ಯಸಿಡ್‌ ಕುಡಿಸಿದ್ದಾರೆ’ ಎಂದು ಸಂತ್ರಸ್ತೆಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಈ ವರ್ಷ ಏಪ್ರಿಲ್‌ ತಿಂಗಳಿನಲ್ಲಿ ಸಂತ್ರಸ್ತೆದಬ್ರಾದ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದರು.

‘ಪ್ರಕರಣ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಇನ್ನಿಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸಂತ್ರಸ್ತೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದರಿಂದ ಅವರನ್ನು ದೆಹಲಿಯ ಆಸ್ಪತ್ರೆವೊಂದಕ್ಕೆ ಸ್ಥಳಾಂತರಿಸಲಾಯಿತು.

ಈ ವೇಳೆ ಮ್ಯಾಜಿಸ್ಟ್ರೇಟ್‌ಗೆ ಹೇಳಿಕೆ ನೀಡಿದ ಸಂತ್ರಸ್ತೆಯು ‘ತನ್ನ ಗಂಡ ಮತ್ತು ಅವರ ಮನೆಯವರು ವರದಕ್ಷಿಣೆಗಾಗಿ ಪೀಡಿಸಿದ್ದಾರೆ. ಅಲ್ಲದೆ ಬಲವಂತವಾಗಿ ಆ್ಯಸಿಡ್‌ ಕುಡಿಸಿದ್ದಾರೆ’ ಎಂದು ತಿಳಿಸಿದ್ದಾರೆ.

‘ದೆಹಲಿಯ ಆಸ್ಪತ್ರೆಯಲ್ಲಿರುವ ಸಂತ್ರಸ್ತೆಯನ್ನು ನಾನು ಭೇಟಿಯಾಗಿದ್ದೇನೆ. ಗ್ವಾಲಿಯರ್‌ನ 22 ವರ್ಷದ ಯುವತಿಗೆ ಆಕೆಯ ಗಂಡ ಮತ್ತು ಮನೆಯವರು ಆ್ಯಸಿಡ್‌ ಕುಡಿಸಿದ್ದಾರೆ. ಅದರಿಂದಾಗಿ ಸಂತ್ರಸ್ತೆಯ ಹಲವು ಅಂಗಾಂಗಗಳು ಸುಟ್ಟಿವೆ’ ಎಂದು ಡಿಸಿಡಬ್ಲ್ಯು ಮುಖ್ಯಸ್ಥೆ ಮಂಗಳವಾರ ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.