ADVERTISEMENT

ದೆಹಲಿ ಚಲೋ: ಭೋಪಾಲ್ ರೈಲು ನಿಲ್ದಾಣದಲ್ಲಿ ಕರ್ನಾಟಕದ 70 ರೈತರು ಪೊಲೀಸ್‌ ವಶಕ್ಕೆ

ಪಿಟಿಐ
Published 12 ಫೆಬ್ರುವರಿ 2024, 9:59 IST
Last Updated 12 ಫೆಬ್ರುವರಿ 2024, 9:59 IST
<div class="paragraphs"><p>ಪ್ರತಿಭಟನಾ ನಿರತ ರೈತ</p></div>

ಪ್ರತಿಭಟನಾ ನಿರತ ರೈತ

   

(ಪ್ರಾತಿನಿಧಿಕ ಚಿತ್ರ–ಕೃಪೆ ಪಿಟಿಐ)

ಭೋಪಾಲ್: ಕರ್ನಾಟಕದಿಂದ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಕನಿಷ್ಠ 70 ರೈತರನ್ನು ಮಧ್ಯಪ್ರದೇಶದ ಭೋಪಾಲ್ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು (ಜಿಆರ್‌ಪಿ) ಸೋಮವಾರ ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ದೆಹಲಿಗೆ ಹೋಗುವ ರೈಲಿನಿಂದ ಕೆಳಗಿಳಿದ ರೈತರು ಪ್ರತಿಭಟನೆ ನಡೆಸಿದರು. ಬಳಿಕ ಮುಂದೆ ಪ್ರಯಾಣಿಸಲು ಯತ್ನಿಸಿದ ರೈತರನ್ನು ರೈಲಿನಿಂದ ಕೆಳಗಿಳಿಸಿ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಜಿಆರ್‌ಪಿಯ ಅಧಿಕಾರಿ ತಿಳಿಸಿದ್ದಾರೆ.

‘ಬೆಳಿಗ್ಗೆ 3ಗಂಟೆ ಸುಮಾರಿಗೆ ಭೋಪಾಲ್ ರೈಲು ನಿಲ್ದಾಣದಲ್ಲಿ ಒಟ್ಟು 70 ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ನಾವು ಪ್ರತಿಭಟನೆ ನಡೆಸಿದ್ದೇವೆ ಎಂದು ರೈತ ಮುಖಂಡ ಮತ್ತು ಧಾರವಾಡ ಜಿಲ್ಲಾ ಕಾರ್ಯದರ್ಶಿ ಪರಶುರಾಮ ತಿಳಿಸಿದ್ದಾರೆ' ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭೋಪಾಲ್‌ನಲ್ಲಿ 100 ರೈತರನ್ನು ತಡೆದ ಪೊಲೀಸರು:

ಫೆಬ್ರುವರಿ 13 ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ರಾಷ್ಟ್ರ ರಾಜಧಾನಿಗೆ ರೈಲಿನಲ್ಲಿ ತೆರಳುತ್ತಿದ್ದ ಕರ್ನಾಟಕದ ಸುಮಾರು 100 ರೈತರನ್ನು ಭೋಪಾಲ್‌ನಲ್ಲಿ ರಾಜ್ಯ ಪೊಲೀಸರು ತಡೆದಿದ್ದಾರೆ ಎಂದು ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ (SKM) ತಿಳಿಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಸ್‌ಕೆಎಂ ದಕ್ಷಿಣ ಭಾರತ ಸಂಚಾಲಕ ಶಾಂತಕುಮಾರ್ ಅವರು, ರೈಲಿನಲ್ಲಿ ಗುಂಪಿನೊಂದಿಗೆ ಪ್ರಯಾಣಿಸುತ್ತಿದ್ದೆವು. ಪೋಲಿಸರು ನಮ್ಮನ್ನು ಭೋಪಾಲ್ ನಿಲ್ದಾಣದಲ್ಲಿ ತಡೆದರು. ಈ ವೇಳೆ ನಮ್ಮ ಕೆಲವು ಸದಸ್ಯರು ಗಾಯಗೊಂಡಿದ್ದಾರೆ ಎಂದು ತಿಳಿಸಿದರು.

ಒಂದೆಡೆ ಕೇಂದ್ರ ಸಚಿವರು ಎಸ್‌ಕೆಎಂ ಮತ್ತಿತರ ರೈತ ಸಂಘಟನೆಗಳೊಂದಿಗೆ ಶಾಂತಿಯುತ ಸಭೆ ನಡೆಸುತ್ತಿದ್ದರೆ, ಇನ್ನೊಂದೆಡೆ ಸರ್ಕಾರ ರೈತರನ್ನು ಪ್ರತಿಭಟನೆಯಲ್ಲಿ ಭಾಗವಹಿಸದಂತೆ ತಡೆಯುತ್ತಿದೆ ಎಂದು ಕಿಡಿಕಾರಿದರು.

ದೇಶಾದ್ಯಂತ ಸುಮಾರು 23 ಮಹಾಪಂಚಾಯತ್‌ಗಳನ್ನು ನಡೆಸಲಾಗಿದೆ. ಮೂರು ತಿಂಗಳ ಹಿಂದೆಯೇ ಪ್ರತಿಭಟನೆಯನ್ನು ಯೋಜಿಸಲಾಗಿತ್ತು. ಇದ್ದಕ್ಕಿದ್ದಂತೆ ಘೋಷಿಸಲಾಗಿಲ್ಲ ಎಂದು ಅವರು ಹೇಳಿದರು.

ಎಂಎಸ್‌ಪಿಗೆ ಕಾನೂನು ಖಾತರಿಯ ಜೊತೆಗೆ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ ಮತ್ತು ಲಖೀಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ರೈತರು ಆಗ್ರಹಿಸಿದ್ದಾರೆ.

ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ, ಆಹಾರ ಸಚಿವ ಪಿಯೂಷ್ ಗೋಯಲ್ ಹಾಗೂ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌  ಅವರು ಚಂಡೀಗಢದಲ್ಲಿ ಇಂದು ಸಂಜೆ ಎಸ್‌ಕೆಎಂ ಸೇರಿದಂತೆ ಪ್ರತಿಭಟನಾ ನಿರತ ರೈತ ಸಂಘಟನೆಗಳನ್ನು ಭೇಟಿ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.