ಕೈಲಾಶ್ ವಿಜಯ ವರ್ಗೀಯ
ಇಂದೋರ್: ‘ಮಹಿಳೆಯರು ತುಂಡು ಉಡುಗೆ ಧರಿಸುವುದನ್ನು ನಾನು ಒಪ್ಪುವುದಿಲ್ಲ. ತುಂಡು ಬಟ್ಟೆ ಧರಿಸುವುದು ವಿದೇಶಿ ಪರಿಕಲ್ಪನೆಯಾಗಿದ್ದು, ಇದು ಬಾರತೀಯ ಸಂಪ್ರದಾಯಕ್ಕೆ ಹೊಂದಿಕೆಯಾಗುವುದಿಲ್ಲ’ ಎಂದು ಮಧ್ಯಪ್ರದೇಶ ಸಚಿವ ಕೈಲಾಶ್ ವಿಜಯವರ್ಗೀಯ ಹೇಳಿದ್ದಾರೆ.
ಸ್ಥಳೀಯ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಡಿಮೆ ಬಟ್ಟೆ ಧರಿಸಿದ ಮಹಿಳೆ ಸುಂದರ ಹಾಗೂ ಕಡಿಮೆ ಭಾಷಣ ಮಾಡುವ ನಾಯಕ ಉತ್ತಮ ಎಂಬ ಗಾದೆ ವಿದೇಶಗಳಲ್ಲಿದೆ. ಆದರೆ ನಾನು ಇದನ್ನು ಅನುಸರಿಸುವುದಿಲ್ಲ ಮತ್ತು ಇದು ತಪ್ಪು’ ಎಂದರು.
‘ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯನ್ನು ದೇವತೆ ಎಂದು ಪರಿಗಣಿಸಲಾಗುತ್ತದೆ. ಇಲ್ಲಿಯ ಮಹಿಳೆ ಒಂದೊಳ್ಳೆ ಬಟ್ಟೆ ಧರಿಸಿ, ಅಲಂಕಾರ ಮಾಡಿಕೊಂಡು ಆಭರಣಗಳನ್ನು ಧರಿಸಿದರೆ ಅವಳನ್ನು ಸುಂದರ ಮಹಿಳೆ ಎಂದು ಜನರು ಪರಿಗಣಿಸುತ್ತಾರೆ. ಆದರೆ ವಿದೇಶಗಳಲ್ಲಿ ಕಡಿಮೆ ಬಟ್ಟೆ ಧರಿಸಿದ ಮಹಿಳೆಯನ್ನು ಸುಂದರ ಎಂದು ಪರಿಗಣಿಸಲಾಗುತ್ತದೆ. ಅದು ಅವರ ಚಿಂತನೆಯಾಗಿದೆ’ ಎಂದು ವಿಜಯವರ್ಗೀಯ ಹೇಳಿದರು.
‘ಕಡಿಮೆ ಬಟ್ಟೆ ಧರಿಸುವ ಮಹಿಳೆಯರು ಶೂರ್ಪನಖಿಯರು’ ಎಂದು ಈ ಹಿಂದೆ ಇವರು ಹೇಳಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.