ADVERTISEMENT

ಲಂಚ ಪಡೆದ ಸಿಬಿಐ ಇನ್‌ಸ್ಪೆಕ್ಟರ್‌ ಕೆಲಸದಿಂದ ವಜಾ

ನರ್ಸಿಂಗ್‌ ಕಾಲೇಜು ಹಗರಣ

ಪಿಟಿಐ
Published 22 ಮೇ 2024, 13:47 IST
Last Updated 22 ಮೇ 2024, 13:47 IST
   

ನವದೆಹಲಿ: ಮಧ್ಯಪ್ರದೇಶ ಮೂಲದ ನರ್ಸಿಂಗ್‌ ಕಾಲೇಜು ಮುಖ್ಯಸ್ಥರಿಂದ ₹10 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದ ಸಿಬಿಐ ಇನ್‌ಸ್ಪೆಕ್ಟರ್‌ ರಾಹುಲ್‌ ರಾಜ್‌ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. 

ಭ್ರಷ್ಟಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದು ಸಿಬಿಐ ಧ್ಯೇಯವಾಗಿದ್ದು, 311ನೇ ವಿಧಿಯ ಅಡಿ ಸರ್ಕಾರಿ ನೌಕರರ ಸೇವೆ ವಜಾಗೊಳಿಸಲು ಸಂವಿಧಾನ ಅನುಮತಿಸಿರುವ ಅವಕಾಶ ಬಳಸಿಕೊಂಡು ರಾಹುಲ್‌ ರಾಜ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅವರು ಹೇಳಿದರು.

ಈ ಪ್ರಕರಣದ ಎಫ್‌ಐಆರ್‌ನಲ್ಲಿ ಹೆಸರಿರುವ ಡಿಎಸ್‌ಪಿ ಆಶಿಶ್‌ ಪ್ರಸಾದ್ ಅವರನ್ನು ಕೇಂದ್ರ ಕಚೇರಿಗೆ ವಾಪಸ್ ಕಳಿಸಲಾಗಿದೆ.  ಮಧ್ಯಪ್ರದೇಶ ಪೊಲೀಸ್‌ ಇಲಾಖೆಯಿಂದ ಸಿಬಿಐಗೆ ನಿಯೋಜಿತರಾಗಿದ್ದ ಸುಶೀಲ್ ಕುಮಾರ್ ಮಜೋಕಾ ಮತ್ತು ರಿಷಿ ಕಾಂತ್ ಅಸಾಥೆ ಅವರನ್ನು ಶೀಘ್ರದಲ್ಲೇ ರಾಜ್ಯ ಪೊಲೀಸ್‌ ಇಲಾಖೆಗೆ ವಾಪಸ್ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ADVERTISEMENT

ಮಲ್ಯ ನರ್ಸಿಂಗ್ ಕಾಲೇಜು ಮುಖ್ಯಸ್ಥ ಅನಿಲ್ ಭಾಸ್ಕರನ್ ಮತ್ತು ಅವರ ಪತ್ನಿ ಸುಮಾ ಅನಿಲ್ ಅವರಿಂದ ₹10 ಲಕ್ಷ ಲಂಚ ಪಡೆಯುತ್ತಿದ್ದಾಗ ರಾಹುಲ್‌ ರಾಜ್ ಭಾನುವಾರ ಸಿಬಿಐ ಅಧಿಕಾರಿಗಳಿಗೆ ನೆರವಾಗಿ ಸಿಕ್ಕಿಬಿದ್ದಿದ್ದರು. ಅನಿಲ್‌ ದಂಪತಿಯನ್ನೂ ಬಂಧಿಸಲಾಗಿದೆ.

ಮಧ್ಯಪ್ರದೇಶದ ನರ್ಸಿಂಗ್ ಕಾಲೇಜುಗಳ ಪರಿಶೀಲನೆ ವೇಳೆ ಅಕ್ರಮ ಕಾಲೇಜುಗಳ ಪರವಾಗಿ ವರದಿ ನೀಡಲು ಮಧ್ಯವರ್ತಿಗಳ ಮೂಲಕ ಲಂಚ ಪಡೆದ ಆರೋಪದಲ್ಲಿ ರಾಹುಲ್‌ ರಾಜ್ ಸೇರಿದಂತೆ 13 ಜನರನ್ನು ಸಿಬಿಐ ಬಂಧಿಸಿದೆ. 

ರಾಜ್ಯಾದ್ಯಂತ ನರ್ಸಿಂಗ್ ಕಾಲೇಜುಗಳು ನಿಗದಿತ ಮಾನದಂಡಗಳನ್ನು ಪಾಲಿಸುತ್ತಿವೆಯೇ ಮತ್ತು ಮೂಲಸೌಕರ್ಯಗಳು ಹಾಗೂ ಅಧ್ಯಾಪಕರ ವಿಷಯದಲ್ಲಿ ಗುಣಮಟ್ಟ ಕಾಪಾಡಿಕೊಂಡಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಹೈಕೋರ್ಟ್‌, ತಪಾಸಣೆ ನಡೆಸುವಂತೆ ಆದೇಶ ನೀಡಿತ್ತು. ಹೈಕೋರ್ಟ್‌ ಆದೇಶದ ಮೇರೆಗೆ ರಚಿಸಲಾಗಿದ್ದ ಸಿಬಿಐ ತನಿಖಾ ತಂಡಗಳಲ್ಲಿರುವ ಅಧಿಕಾರಿಗಳೇ ಭ್ರಷ್ಟಾಚಾರಾದಲ್ಲಿ ಶಾಮೀಲಾಗಿರುವುದಾಗಿ ತನ್ನ ಆಂತರಿಕ ಜಾಗೃತ ದಳ ನೀಡಿದ ಮಾಹಿತಿ ಆಧರಿಸಿ ಸಿಬಿಐ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.