
ದಿನಪತ್ರಿಕೆಯಲ್ಲಿ ಮಕ್ಕಳಿಗೆ ಬಿಸಿಯೂಟ; ಟೀಕೆ ಬಳಿಕ ಸ್ಟೀಲ್‌ಪ್ಲೇಟ್ ವಿತರಣೆ
ಶಿಯೋಪುರ್: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳು ದಿನಪತ್ರಿಕೆಯಲ್ಲಿ ಊಟ ಮಾಡುತ್ತಿದ್ದ ವಿಡಿಯೊ ತೀವ್ರ ಟೀಕೆಗೆ ಗುರಿಯಾಗುತ್ತಿದ್ದಂತೆ ಶಾಲಾ ಮಕ್ಕಳಿಗೆ ಸ್ಟೀಲ್ ಪ್ಲೇಟ್ ವಿತರಿಸಲಾಗಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇರಿದಂತೆ ಹಲವರು, ಮಕ್ಕಳು ದಿನಪತ್ರಿಕೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಮಾಡುತ್ತಿರುವ ವಿಡಿಯೊ ಹಂಚಿಕೊಂಡು ಆಡಳಿತರೂಢ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು.
ವಿಡಿಯೊ ಹರಿದಾಡುತ್ತಿದ್ದಂತೆ ತಕ್ಷಣ ಎಚ್ಚೆತ್ತ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ರಾಮ್‌ನಿವಾಸ್ ರಾವತ್ ಮತ್ತು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಭಿಷೇಕ್ ಮಿಶ್ರಾ ಜತೆಯಾಗಿ ಮಕ್ಕಳಿಗೆ ಸ್ಟೀಲ್ ಪ್ಲೇಟ್ ವಿತರಿಸಿದ್ದಾರೆ.
ಪ್ಲೇಟ್ ವಿತರಿಸಿದ ಬಳಿಕ ಹಂಚಿಕೊಂಡ ವಿಡಿಯೊದಲ್ಲಿ ಶಾಲಾ ಆವರಣವನ್ನು ಅಲಂಕರಿಸಲಾಗಿದ್ದು, ಮಕ್ಕಳು ಹೊಸ ಸ್ಟೀಲ್ ಪ್ಲೀಟ್‌ನಲ್ಲಿ ಊಟ ಮಾಡುತ್ತಿರುವ ದೃಶ್ಯವಿದೆ.
ಈ ಕುರಿತು ಮಿಶ್ರಾ, ‘ನಮ್ಮ ಇಡೀ ತಂಡವು ಶಾಲೆಗೆ ಭೇಟಿ ನೀಡಿ ಆಹಾರವನ್ನು ಪರಿಶೀಲಿಸಿತು. ಊಟವನ್ನು ಸ್ಟೀಲ್ ತಟ್ಟೆಗಳಲ್ಲಿ ಸರಿಯಾಗಿ ಬಡಿಸಲಾಗಿದೆ. ನಾನು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಅಲ್ಲಿ ಊಟವನ್ನು ಸೇವಿಸಿದೆವು. ಇಂತಹ ಘಟನೆ ಮತ್ತೆ ಮರುಕಳಿಸದಂತೆ ಎಚ್ಚರಿವಹಿಸುತ್ತೇವೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶಾಲೆಯ ಉಸ್ತುವಾರಿಯಾಗಿದ್ದ ಭೋಗಿರಾಮ್ ಧಕಾಡ್ ಅವರನ್ನು ಅಮಾನತುಗೊಳಿಸಲಾಗಿದ್ದು, ಇತರ ಇಬ್ಬರು ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಮಕ್ಕಳು ದಿನಪತ್ರಿಕೆಯಲ್ಲಿ ಊಟ ಮಾಡುತ್ತಿರುವ ವಿಡಿಯೊ ಹಂಚಿಕೊಂಡಿದ್ದ ರಾಹುಲ್ ಗಾಂಧಿ, ‘ಆಡಳಿತರೂಢ ಬಿಜಿಪಿಯ ಅಭಿವೃದ್ದಿ ಮರೀಚಿಕೆಯಿದ್ದಂತೆ, ದೇಶದ ಭವಿಷ್ಯವಾಗಿರುವ, ಕನಸು ಕಾಣುವ ಮುಗ್ಧ ಮಕ್ಕಳಿಗೆ ಒಂದು ತಟ್ಟೆಯಲ್ಲಿ ಊಟ ಮಾಡುವ ಘನತೆಯೂ ಸಿಗುತ್ತಿಲ್ಲ. ಇಂತಹ ದಯನೀಯ ಸ್ಥಿತಿಯಲ್ಲಿ ದೇಶದ ಮಕ್ಕಳ ಭವಿಷ್ಯವನ್ನು ಪೋಷಿಸಲು ಇಂತಹ ಮುಖ್ಯಮಂತ್ರಿ ಮತ್ತು ಪ್ರಧಾನಿ ನಾಚಿಕೆಪಡಬೇಕು‘ ಎಂಉ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.