ADVERTISEMENT

ರಬ್ಬರ್‌ ಟ್ಯೂಬ್‌ ಮೂಲಕ ಶವವನ್ನು ನದಿಯಲ್ಲಿ ಸಾಗಿಸಿದ ಗ್ರಾಮಸ್ಥರು: ತನಿಖೆಯ ಭರವಸೆ

ಪಿಟಿಐ
Published 16 ಆಗಸ್ಟ್ 2022, 11:29 IST
Last Updated 16 ಆಗಸ್ಟ್ 2022, 11:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅನುಪ್ಪುರ್, ಮಧ್ಯಪ್ರದೇಶ: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ನರ್ಮದಾ ನದಿಯ ಪ್ರವಾಹದಿಂದ ಮುಳುಗಡೆಯಾಗಿದ್ದ ಹಿನ್ನೆಲೆಯಲ್ಲಿ, ಶವವೊಂದರ ಅಂತ್ಯಕ್ರಿಯೆ ಮಾಡಲು ಅಲ್ಲಿನ ಗ್ರಾಮಸ್ಥರ ಗುಂಪೊಂದು, ಶವವನ್ನು ರಬ್ಬರ್‌ ಟ್ಯೂಬ್‌ಗೆ ಕಟ್ಟಿ, ನದಿ ದಾಟಿಸಿದ ಘಟನೆಮಧ್ಯಪ್ರದೇಶದ ಅನುಪ್ಪುರ್‌ ಜಿಲ್ಲೆಯ ಥಾಡ್‌ಪಥರಾದಲ್ಲಿನಡೆದಿದೆ.

ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಬಳಿಕ ಸ್ಥಳೀಯ ಆಡಳಿತದ ಅಧಿಕಾರಿಯೊಬ್ಬರು ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

‘ಥಾಡ್‌ಪಥರಾ ಗ್ರಾಮದ ನಿವಾಸಿ ವಿಶ್ಮತ್ ನಂದ (55) ಅವರಿಗೆ ಹೃದಯಾಘಾತವಾದ ಬಳಿಕ, ಗ್ರಾಮಸ್ಥರು ಅವರನ್ನು ನೆರೆಯ ದಿಂಡೋರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಮಧ್ಯಾಹ್ನ ನಂದಾ ಅವರು ಮೃತಪಟ್ಟರು’ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಎಸ್‌ಸಿ ರೈ ಅವರು ಹೇಳಿದರು.

‘ಪ್ರಕರಣದ ಬಗ್ಗೆ ನನಗೆ ತಿಳಿದಿದೆ. ಪಥರಾಕುಚದವರೆಗೆ ಶವವನ್ನು ಸಾಗಿಸಲು ಆಂಬ್ಯುಲೆನ್ಸ್ ಬಳಸಲಾಯಿತು. ಆದರೆ ನದಿಯ ಪ್ರವಾಹದಿಂದ ಥಾಡ್‌ಪಥರಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಗೆ ಸೇತುವೆಯಿಲ್ಲದ ಕಾರಣಆಂಬುಲೆನ್ಸ್‌ ಅನ್ನು ಅಲ್ಲಿಯೇ ನಿಲ್ಲಿಸಬೇಕಾಯಿತು’ ಎಂದು ಅವರು ಹೇಳಿದರು.

ಈ ಮಧ್ಯೆ, ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಭಿಷೇಕ್ ಚೌಧರಿ ಅವರು, ‘ಈ ವಿಷಯ ನನ್ನ ಗಮನಕ್ಕೆ ಬಂದಿದೆ. ನದಿಯಲ್ಲಿ ಶವ ಸಾಗಿಸುವಂತಹ ಸಂದರ್ಭಗಳು ಹೇಗೆ ಉದ್ಭವಿಸಿದವು ಎಂಬುದನ್ನು ಪರಿಶೀಲಿಸುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.