ದೇವೇಂದ್ರ ಫಡಣವೀಸ್
(ಪಿಟಿಐ ಚಿತ್ರ)
ಮುಂಬೈ: 'ಮಹಾರಾಷ್ಟ್ರ ಲೋಕಸೇವಾ ಆಯೋಗದ (ಎಂಪಿಎಸ್‌ಸಿ) ಮುಖಾಂತರ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಮರಾಠಿ ಭಾಷೆಯಲ್ಲೇ ನಡೆಯಲಿವೆ' ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
ರಾಜ್ಯ ವಿಧಾನ ಪರಿಷತ್ತಿನಲ್ಲಿ ಶಿವಸೇನಾ (ಯುಬಿಟಿ) ಶಾಸಕ ಮಿಲಿಂದ್ ನಾರ್ವೇಕರ್ ಅವರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಫಡಣವೀಸ್, ಈ ಕುರಿತು ವಿವರಣೆ ನೀಡಿದ್ದಾರೆ.
'ಕೃಷಿ ಹಾಗೂ ಎಂಜಿನಿಯರಿಂಗ್ ವಿಭಾಗಗಳಿಗೆ ಸಂಬಂಧಿಸಿದ ಕೆಲವು ಪರೀಕ್ಷೆಗಳನ್ನು ಇಂಗ್ಲಿಷ್‌ನಲ್ಲಿ ಮಾತ್ರ ನಡೆಸಲಾಗುತ್ತಿದೆ. ಈ ಪರೀಕ್ಷೆಗಳನ್ನು ಮರಾಠಿಯಲ್ಲಿ ಏಕೆ ನಡೆಸಲಾಗುತ್ತಿಲ್ಲ' ಎಂದು ನಾರ್ವೇಕರ್ ಪ್ರಶ್ನಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಫಡಣವೀಸ್, 'ಈ ಪರೀಕ್ಷೆಗಳನ್ನು ಈಗಾಗಲೇ ಮರಾಠಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಡೆಸಲಾಗುತ್ತಿದೆ. ಆದಾಗ್ಯೂ, ಕೆಲವು ವಿಷಯಗಳಲ್ಲಿ ವಿಶೇಷವಾಗಿ ಕೃಷಿ ಹಾಗೂ ಎಂಜಿನಿಯರಿಂಗ್ ಸಂಬಂಧ ಪರೀಕ್ಷೆಗಳನ್ನು ಇಂಗ್ಲಿಷ್‌ನಲ್ಲೇ ನಡೆಸಬೇಕೆಂಬ ನ್ಯಾಯಾಲಯ ತೀರ್ಪು ಇದೆ' ಎಂದು ಉಲ್ಲೇಖಿಸಿದ್ದಾರೆ.
'ನ್ಯಾಯಾಲಯದಲ್ಲಿ ಚರ್ಚೆ ನಡೆದಾಗ, ಸರ್ಕಾರಿ ಮಟ್ಟದಲ್ಲೂ ಚರ್ಚಿಸಲಾಯಿತು. ಈ ವಿಷಯಗಳಿಗೆ ಸಂಬಂಧಿಸಿದ ಪಠ್ಯ ಪುಸ್ತಕಗಳು ಮರಾಠಿಯಲ್ಲಿ ಇಲ್ಲ ಎಂಬುದು ಗಮನಕ್ಕೆ ಬಂತು. ಇದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು' ಎಂದು ಅವರು ಹೇಳಿದ್ದಾರೆ.
'ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ವಿಷಯಗಳಿಗೂ ಮರಾಠಿ ಪಠ್ಯ ಪುಸ್ತಕಗಳನ್ನು ಲಭ್ಯವಾಗುವಂತೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ' ಎಂದು ಸಿಎಂ ಹೇಳಿದರು.
'ಸದ್ಯ ಪಠ್ಯ ಪುಸ್ತಕಗಳು ಲಭ್ಯವಿಲ್ಲದಿದ್ದರೂ ಹೊಸ ಶಿಕ್ಷಣ ನೀತಿಯ ಅನ್ವಯ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಮರಾಠಿಯಲ್ಲೇ ನಡೆಸಲು ನಮಗೆ ಅವಕಾಶ ನೀಡುತ್ತದೆ. ಹಾಗಾಗಿ ಅಧ್ಯಯನ ಸಾಮಗ್ರಿಗಳ ಕೊರತೆಯಿಂದಾಗಿ ಮರಾಠಿಯಲ್ಲಿ ನಡೆಯದ ಎಂಪಿಎಸ್‌ಸಿ ಪರೀಕ್ಷೆಗಳನ್ನು ಹೊಸ ಪಠ್ಯಪುಸ್ತಕಗಳ ಸಹಾಯದೊಂದಿಗೆ ನಿಗದಿಪಡಿಸಲಾಗುವುದು. ಈ ಪರೀಕ್ಷೆಗಳನ್ನು ಮರಾಠಿಯಲ್ಲೇ ನಡೆಸಲಾಗುವುದು' ಎಂದು ಭರವಸೆ ನೀಡಿದರು.
'ಭಾಷಾ ತೊಡಕಿನಿಂದಾಗಿ ತೊಂದರೆ ಎದುರಿಸುತ್ತಿರುವ ಮರಾಠಿ ಭಾಷಿಕರಿಗೆ ಇದರಿಂದ ಪ್ರಯೋಜನ ಸಿಗಲಿದೆ' ಎಂದು ಅವರು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.