
ಗುರುವಾಯೂರು ದೇವಸ್ಥಾನಕ್ಕೆ ಉದ್ಯಮಿ ಮುಕೇಶ್ ಅಂಬಾನಿ ಭೇಟಿ
ತ್ರಿಶೂರು: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರು ಇಂದು ಬೆಳಿಗ್ಗೆ ಕೇರಳದ ತ್ರಿಶೂರ್ ಜಿಲ್ಲೆಯ ಪ್ರಸಿದ್ಧ ಗುರುವಾಯೂರಿನ ಗುರುವಾಯೂರಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ವಿಶೇಷ ಹೆಲಿಕಾಪ್ಟರ್ ಮೂಲಕ ಅವರು ತ್ರಿಶೂರ್‌ಗೆ ಆಗಮಿಸಿ ಅಲ್ಲಿಂದ ಕಾರಿನಲ್ಲಿ ದೇವಸ್ಥಾನಕ್ಕೆ ತೆರಳಿದರು.
ಈ ವೇಳೆ ಗುರುವಾಯೂರು ದೇವಳಂನ ಅಧ್ಯಕ್ಷ ವಿ.ಕೆ. ವಿಜಯನ್ ಅವರು ಅಂಬಾನಿ ಅವರನ್ನು ಸ್ವಾಗತಿಸಿ ಬೆಳಿಗ್ಗೆ 7.30 ಕ್ಕೆ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಿಕೊಟ್ಟರು.
ದೇವಳಂ ವತಿಯಿಂದ ಮುಕೇಶ್ ಅಂಬಾನಿ ಅವರನ್ನು ಸನ್ಮಾನಿಸಲಾಯಿತು. ವಿ.ಕೆ. ವಿಜಯನ್ ಅವರು ಗುರುವಾಯೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಹಾಗೂ ಆಧುನಿಕ ಪಶು ಆಸ್ಪತ್ರೆಯ ಬಗ್ಗೆ ವಿವರಣೆ ನೀಡಿದರು.
ಈ ವೇಳೆ ಮುಕೇಶ್ ಅಂಬಾನಿ ಅವರು ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‌ಗೆ ₹15 ಕೋಟಿ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದರು. ಅಲ್ಲದೇ ಪಶು ಆಸ್ಪತ್ರೆಗೆ ತಮ್ಮ ಒಡೆತನದ ವಂಟಾರಾ ಮೂಲಕ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂಬ ಭರವಸೆಯನ್ನು ನೀಡಿದರು.
ಅಂಬಾನಿ ಅವರು ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ ಬೆಳಿಗ್ಗೆ 8 ಗಂಟೆಗೆ ವಾಪಸ್ಸಾದರು ಎಂದು ಗುರುವಾಯೂರು ದೇವಳಂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.