ADVERTISEMENT

Terror Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: 28 ಮಂದಿ ಸಾವು

ಪಹಲ್ಗಾಮ್‌ ಬಳಿಯ ಬೈಸರನ್‌ ಕಣಿವೆಯಲ್ಲಿ ದುಷ್ಕೃತ್ಯ: 28 ಮಂದಿ ಸಾವು | ತಾನೇ ದಾಳಿ ನಡೆಸಿರುವುದಾಗಿ ಹೇಳಿಕೊಂಡ ‘ಲಷ್ಕರ್–ಎ–ತಯ್ಯಬಾ’ದ ಜೊತೆ ನಂಟಿನ ‘ದಿ ರೆಸಿಸ್ಟೆನ್ಸ್‌ ಫ್ರಂಟ್‌’

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 23:30 IST
Last Updated 22 ಏಪ್ರಿಲ್ 2025, 23:30 IST
<div class="paragraphs"><p>ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಮೃತರಾದ ಸಂಗಾತಿಯ ಶವದ ಬಳಿ ರೋಧಿಸುತ್ತಿರುವ ಮಹಿಳೆ</p></div>

ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಮೃತರಾದ ಸಂಗಾತಿಯ ಶವದ ಬಳಿ ರೋಧಿಸುತ್ತಿರುವ ಮಹಿಳೆ

   

ಶ್ರೀನಗರ: ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಸನಿಹದಲ್ಲಿ ಇರುವ, ದೃಶ್ಯಕಾವ್ಯದಂತೆ ಕಾಣುವ ಹುಲ್ಲುಗಾವಲಿನಲ್ಲಿ ಖುಷಿಯಿಂದ ಸಮಯ ಕಳೆಯುತ್ತಿದ್ದ ಪ್ರವಾಸಿಗರ ಮೇಲೆ ಭಯೋತ್ಪಾದಕರು ಮಂಗಳವಾರ ಮನಬಂದಂತೆ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಗೆ ಸಿಲುಕಿ 28 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಪ್ರವಾಸಿಗರು.

ಅಲ್ಲದೆ, ಉಗ್ರರ ಗುಂಡಿಗೆ ಸಿಲುಕಿ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಈ ದಾಳಿ ನಡೆದಿದೆ. ಮೃತಪಟ್ಟವರಲ್ಲಿ ಇಬ್ಬರು ವಿದೇಶಿಯರು, ಇಬ್ಬರು ಸ್ಥಳೀಯರು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

‘ಈಚಿನ ವರ್ಷಗಳಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆದ ಇತರ ಯಾವುದೇ ದಾಳಿಗಳಿಗಿಂತ ಇದು ದೊಡ್ಡದು’ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಭಾರತಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿಯೇ ಈ ದಾಳಿ ನಡೆದಿದೆ. ಪುಲ್ವಾಮಾದಲ್ಲಿ ಭಯೋತ್ಪಾದಕರು 2019ರ ಫೆಬ್ರುವರಿಯಲ್ಲಿ ಆತ್ಮಾಹುತಿ ದಾಳಿ ನಡೆಸಿದ ನಂತರದ ಅತಿದೊಡ್ಡ ದಾಳಿ ಇದು ಎಂದು ಹೇಳಲಾಗಿದೆ.

ಪಾಕಿಸ್ತಾನದಲ್ಲಿ ನೆಲೆಯಾಗಿರುವ ನಿಷೇಧಿತ ಭಯೋತ್ಪಾದಕ ಸಂಘಟನೆ ‘ಲಷ್ಕರ್–ಎ–ತಯ್ಯಬಾ’ದ ಜೊತೆ ನಂಟು ಹೊಂದಿರುವ ‘ದಿ ರೆಸಿಸ್ಟೆನ್ಸ್‌ ಫ್ರಂಟ್‌’ ಈ ದಾಳಿಯನ್ನು ತಾನೇ ನಡೆಸಿರುವುದಾಗಿ ಹೇಳಿಕೊಂಡಿದೆ.

ಭಯೋತ್ಪಾದಕರು ಜಮ್ಮುವಿನ ಕಿಶ್ತವಾಢದಿಂದ, ಕೋಕರ್ನಾಗ್ ಮೂಲಕ ಬೈಸರನ್‌ಗೆ ಬಂದಿರಬಹುದು ಎಂದು ಅಧಿಕಾರಿಗಳು ಊಹಿಸಿದ್ದಾರೆ.

ಪ್ರಧಾನಿಗೆ ಮಾಹಿತಿ: ಸೌದಿ ಅರೇಬಿಯಾ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಯೋತ್ಪಾದಕರ ದಾಳಿ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಹಿತಿ ನೀಡಿದ್ದಾರೆ. 

ಭಯೋತ್ಪಾದಕರ ದಾಳಿ ನಡೆದ ಸ್ಥಳದ್ದು ಎನ್ನಲಾದ ಕೆಲವು ವಿಡಿಯೊಗಳು ಅಲ್ಲಿ ಏನಾಯಿತು ಎಂಬುದನ್ನು ದಾಖಲಿಸಿವೆ. ಮೃತದೇಹಗಳು ಮತ್ತು ಮಹಿಳೆಯರು ಅಳುತ್ತಿರುವ ದೃಶ್ಯಗಳು ಅದರಲ್ಲಿವೆ. ಆದರೆ, ಈ ವಿಡಿಯೊಗಳ ಖಚಿತತೆ ಬಗ್ಗೆ ಮಾಹಿತಿ ಇಲ್ಲ.

ದಾಳಿ ನಡೆಯುವುದಕ್ಕೂ ಮೊದಲು ಸ್ಥಳದಲ್ಲಿ ಪರಿಸ್ಥಿತಿ ಸಹಜವಾಗಿ ಇತ್ತು. ಜನರು ಖುಷಿಯಿಂದ ಕಾಲ ಕಳೆಯುತ್ತಿದ್ದರು. ಆದರೆ, ದಾಳಿಯ ನಂತರದಲ್ಲಿ ಮೃತದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದವು, ಜನರು ಸಹಾಯಕ್ಕೆ ಅಂಗಲಾಚುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಅಲ್ಲಿನ ಭಯಾನಕ ಕ್ಷಣಗಳ ಬಗ್ಗೆ ವಿವರ ಹಂಚಿಕೊಂಡಿದ್ದಾರೆ. ಐದು ಮಂದಿ ದಾಳಿ ನಡೆಸಿದರು ಎಂದು ಕೆಲವರು ತಿಳಿಸಿದ್ದಾರೆ.

‘ನನ್ನ ಗಂಡನ ತಲೆಗೆ ಗುಂಡಿಕ್ಕಲಾಯಿತು. ಏಳು ಮಂದಿ ಇತರರು ದಾಳಿಯಲ್ಲಿ ಗಾಯಗೊಂಡಿದ್ದಾರೆ’ ಎಂದು ಮಹಿಳೆಯೊಬ್ಬರು ಸುದ್ದಿಸಂಸ್ಥೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಗುಂಡಿನ ಮೊರೆತ ಕೇಳಿದ ತಕ್ಷಣ ಅಲ್ಲಿ ಭೀತಿ ಆವರಿಸಿತು. ಪ್ರವಾಸಿಗರು ತಮ್ಮನ್ನು ರಕ್ಷಿಸಿಕೊಳ್ಳಲು ಓಡಿದರು. ಆದರೆ ಆ ವಿಶಾಲವಾದ ಬಯಲಿನಲ್ಲಿ ಅಡಗಲು ಸ್ಥಳಗಳೇ ಇರಲಿಲ್ಲ ಎಂದು ಇನ್ನೊಬ್ಬ ಮಹಿಳೆ ತಿಳಿಸಿದ್ದಾರೆ.

ಜನರ ಮೇಲೆ ಗುಂಡು ಹಾರಿಸುವ ಮೊದಲು ಭಯೋತ್ಪಾದಕರು ಅವರ ಹೆಸರು ಕೇಳುತ್ತಿದ್ದರು ಎಂದು ಮಹಿಳೆಯೊಬ್ಬರು ತಿಳಿಸಿದ್ದಾರೆ.

ದಾಳಿ ನಡೆದ ನಂತರದಲ್ಲಿ ಇಡೀ ಜಿಲ್ಲಾಡಳಿತ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಲಾಗಿದೆ. ನೆರವಿಗೆ ಆಂಬುಲೆನ್ಸ್‌ಗಳನ್ನು ಕಳುಹಿಸಲಾಗಿದೆ. ಬೈಸರನ್‌ಗೆ ಕಾಲ್ನಡಿಗೆಯಲ್ಲಿ ಅಥವಾ ಕುದುರೆಗಳ ಮೂಲಕ ಮಾತ್ರ ತೆರಳಲು ಸಾಧ್ಯವಿರುವ ಕಾರಣ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಹೆಲಿಕಾಪ್ಟರ್ ನೆರವನ್ನೂ ಪಡೆಯಲಾಯಿತು. ಗಾಯಗೊಂಡ ಕೆಲವರನ್ನು ಸ್ಥಳೀಯರು ತಮ್ಮ ಗಿಡ್ಡತಳಿಯ ಕುದುರೆಗಳ ಮೇಲೆ ಕರೆತಂದಿದ್ದಾರೆ.

ಗುಂಡಿನ ದಾಳಿ ನಡೆದಿರುವ ಆರಂಭಿಕ ಮಾಹಿತಿ ಸಿಕ್ಕ ತಕ್ಷಣ ಸೇನೆ, ಸಿಆರ್‌ಪಿಎಫ್‌ ಮತ್ತು ಸ್ಥಳೀಯ ಪೊಲೀಸರು ಬೈಸರನ್‌ಗೆ ಧಾವಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಾಳಿ ನಡೆಸಿದವರನ್ನು ಗುರಿಯಾಗಿಸಿಕೊಂಡು ಭಾರಿ ಕಾರ್ಯಾಚರಣೆ ಆರಂಭವಾಗಿದೆ. ಭದ್ರತಾ ಸಿಬ್ಬಂದಿ ಎಲ್ಲ ದಿಕ್ಕುಗಳಲ್ಲಿಯೂ ತಪಾಸಣೆ ಆರಂಭಿಸಿದ್ದಾರೆ.

ದಾಳಿಯ ಸುದ್ದಿ ಗೊತ್ತಾಗುತ್ತಿದ್ದಂತೆ ಪಹಲ್ಗಾಮ್ ಪಟ್ಟಣದಲ್ಲಿ ಮೌನ ಆವರಿಸಿತು. ಪ‍್ರವಾಸಿಗರು ಗುಂಪುಗಳಲ್ಲಿ ಅಲ್ಲಿಂದ ಬೇರೆಡೆ ತೆರಳಲಾರಂಭಿಸಿದರು. ಕಾಶ್ಮೀರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯು ಹೆಚ್ಚಳ ಕಾಣುತ್ತಿರುವ ಹೊತ್ತಿನಲ್ಲಿ ಈ ದಾಳಿ ಆಗಿದೆ.

ಜಮ್ಮು ಮತ್ತು ಕಾಶ್ಮೀರದ ಆಡಳಿತವು ಅನಂತನಾಗ್ ಮತ್ತು ಶ್ರೀನಗರದಲ್ಲಿ ತುರ್ತು ನಿಯಂತ್ರಣ ಕೇಂದ್ರ ಆರಂಭಿಸಿದೆ.

2000ನೆಯ ಇಸವಿಯಲ್ಲಿ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ, ದಕ್ಷಿಣ ಕಾಶ್ಮೀರದ ಛತ್ತಿಸಿಂಹಪೊರಾದಲ್ಲಿ ಭಯೋತ್ಪಾದಕರು ದಾಳಿ ನಡೆಸಿ 35 ಮಂದಿ ಸಿಖ್ಖರನ್ನು ಕೊಂದಿದ್ದರು.

ಇಬ್ಬರು ಕನ್ನಡಿಗರು ಬಲಿ

ಬೆಂಗಳೂರು: ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸಹ ಬಲಿಯಾಗಿದ್ದಾರೆ. ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗದ ಮಂಜುನಾಥ್‌ ರಾವ್‌ ಹಾಗೂ ಬೆಂಗಳೂರಿನ ಭರತ್‌ ಭೂಷಣ್‌ ಉಗ್ರರ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಲು ಸಚಿವ ಸಂತೋಷ್‌ ಲಾಡ್‌ ನೇತೃತ್ವದ ತಂಡ ರಾಜ್ಯದ ತಂಡವೂ ಪಹಲ್ಗಾಮ್‌ಗೆ ತೆರಳುತ್ತಿದೆ.

ಪುಟಾಣಿ ಸ್ವಿಟ್ಜರ್ಲೆಂಡ್‌ನಲ್ಲಿ ರಕ್ತದೋಕುಳಿ

ರೆಸಾರ್ಟ್‌ಗಳ ಪಟ್ಟಣ ಎಂದೇ ಖ್ಯಾತಿ ಪಡೆದಿರುವ ಪಹಲ್ಗಾಮ್‌ನಿಂದ ಆರು ಕಿ.ಮೀ. ದೂರದಲ್ಲಿರುವ ಬೈಸರನ್‌ನಲ್ಲಿ ವಿಶಾಲವಾದ ಹುಲ್ಲುಗಾವಲು ಇದೆ. ಇದನ್ನು ಪೈನ್ ಅರಣ್ಯ, ಪರ್ವತಗಳು ಸುತ್ತುವರೆದಿವೆ. ಇದು ದೇಶ ವಿದೇಶಗಳ ಪ್ರವಾಸಿಗರಿಗೆ ಮತ್ತು ಚಾರಣಿಗರಿಗೆ ಅಚ್ಚುಮೆಚ್ಚಿನ ತಾಣ.

1980ರ ದಶಕದಲ್ಲಿ ಸಿನಿಮಾ ನಿರ್ದೇಶಕರು ಈ ಪ್ರದೇಶವನ್ನು ಹುಡುಕಿಕೊಂಡು ಬರುತ್ತಿದ್ದರು.

ಪುಟಾಣಿ ಸ್ವಿಟ್ಜರ್ಲೆಂಡ್‌ ಎಂಬ ಹೆಗ್ಗಳಿಕೆ ಪಡೆದಿರುವ ಇಲ್ಲಿಗೆ ಶಸ್ತ್ರಸಜ್ಜಿತರಾಗಿ ನುಗ್ಗಿದ ಭಯೋತ್ಪಾದಕರು, ಅಲ್ಲಿ ತಿಂಡಿ–ತಿನಿಸುಗಳ ಅಂಗಡಿಗಳ ಮುಂದೆ ಅಡ್ಡಾಡುತ್ತಿದ್ದ, ಗಿಡ್ಡತಳಿಯ ಕುದುರೆಗಳ ಮೇಲೆ ಸವಾರಿ ನಡೆಸುತ್ತಿದ್ದ, ಪಿಕ್‌ನಿಕ್‌ನ ಖುಷಿ ಸವಿಯುತ್ತಿದ್ದ ಪ್ರವಾಸಿಗರ ಮೇಲೆ ಗುಂಡು ಹಾರಿಸಲು ಆರಂಭಿಸಿದರು ಎಂದು ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಭಯೋತ್ಪಾದಕರ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಪ್ರೀತಿಪಾತ್ರರನ್ನು ಕಳೆದು ಕೊಂಡವರಿಗೆ ನನ್ನ ಸಂತಾಪಗಳು, ದಾಳಿಯಿಂದ ತೊಂದರೆಗೆ ಒಳಗಾದವರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ. ಹೀನ ಕೃತ್ಯದ ಹಿಂದಿರುವವರಿಗೆ ಶಿಕ್ಷೆಯಾಗುತ್ತದೆ... ಭಯೋತ್ಪಾದನೆ ವಿರುದ್ಧ ಹೋರಾಡುವ ನಮ್ಮ ದೃಢಸಂಕಲ್ಪ ಇನ್ನಷ್ಟು ಬಲವಾಗುತ್ತದೆ
 ನರೇಂದ್ರ ಮೋದಿ, ಪ್ರಧಾನಿ

ಭಯೋತ್ಪಾದಕರ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಪ್ರೀತಿಪಾತ್ರರನ್ನು ಕಳೆದು ಕೊಂಡವರಿಗೆ ನನ್ನ ಸಂತಾಪಗಳು, ದಾಳಿಯಿಂದ ತೊಂದರೆಗೆ ಒಳಗಾದವರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ. ಹೀನ ಕೃತ್ಯದ ಹಿಂದಿರುವವರಿಗೆ ಶಿಕ್ಷೆಯಾಗುತ್ತದೆ... ಭಯೋತ್ಪಾದನೆ ವಿರುದ್ಧ ಹೋರಾಡುವ ನಮ್ಮ ದೃಢಸಂಕಲ್ಪ ಇನ್ನಷ್ಟು ಬಲವಾಗುತ್ತದೆ
ನರೇಂದ್ರ ಮೋದಿ, ಪ್ರಧಾನಿ
ಪ್ರವಾಸಿಗರ ಮೇಲಿನ ದಾಳಿ ಆಕ್ರೋಶ ಮೂಡಿಸಿದೆ. ಮೃತರ ಕುಟುಂಬದ ಸದಸ್ಯರಿಗೆ ಸಂತಾಪಗಳು. ಈ ದಾಳಿಯಲ್ಲಿ ಭಾಗಿಯಾದವರನ್ನು ಬಿಡುವುದಿಲ್ಲ. ಅವರು ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ
ಅಮಿತ್ ಶಾ, ಕೇಂದ್ರ ಗೃಹ ಸಚಿವ
ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯು ಆಘಾತಕಾರಿ, ನೋವಿನ ಸಂಗತಿ. ಅಮಾಯಕರ ಮೇಲಿನ ಅಮಾನವೀಯ ದಾಳಿಗೆ ಕ್ಷಮೆ ಇಲ್ಲ
ದ್ರೌಪದಿ ಮುರ್ಮು, ರಾಷ್ಟ್ರಪತಿ
ನಮ್ಮ ಪ್ರವಾಸಿಗರ ಮೇಲಿನ ದಾಳಿಯು ಒಂದು ದೌರ್ಜನ್ಯ. ದಾಳಿ ನಡೆಸಿದವರು ಮೃಗಗಳು, ಅವರು ಮನುಷ್ಯರಲ್ಲ, ಅವರು ಖಂಡನಾರ್ಹರು. ಯಾವ ಪದ ಬಳಸಿ ಖಂಡಿಸಿದರೂ ಸಾಕಾಗದು. ಮೃತರ ಕುಟುಂಬಗಳಿಗೆ ನನ್ನ ಸಹಾನುಭೂತಿ ಇದೆ
ಒಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.