ADVERTISEMENT

ಮುಂಬೈ: 19 ಅಂತಸ್ತಿನ ನೂತನ ಕಟ್ಟಡವನ್ನು ಕೋವಿಡ್-19 ಆಸ್ಪತ್ರೆಗೆ ನೀಡಿದ ಬಿಲ್ಡರ್

ಏಜೆನ್ಸೀಸ್
Published 21 ಜೂನ್ 2020, 11:45 IST
Last Updated 21 ಜೂನ್ 2020, 11:45 IST
ಕೋವಿಡ್-19 ಆಸ್ಪತ್ರೆಯಾಗಿ ಬದಲಾದ ಮುಂಬೈನ ನೂತನ ಬಹುಮಹಡಿ ಕಟ್ಟಡ
ಕೋವಿಡ್-19 ಆಸ್ಪತ್ರೆಯಾಗಿ ಬದಲಾದ ಮುಂಬೈನ ನೂತನ ಬಹುಮಹಡಿ ಕಟ್ಟಡ   

ಮುಂಬೈ: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕೋವಿಡ್-19 ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಹೋರಾಟ ನಡೆಸುತ್ತಲೇ ಇದ್ದು, ಅನೇಕ ಮುಂಬೈಯಿಗರು ಸಂಕಷ್ಟದ ಪರಿಸ್ಥಿತಿಯಲ್ಲಿ ಇತರರಿಗೆ ಸಹಾಯ ಮಾಡಲು ಮುಂದಾಗುತ್ತಿದ್ದಾರೆ.

ನಗರ ಮೂಲದಬಿಲ್ಡರ್ ಒಬ್ಬರು ನೂತನವಾಗಿ ನಿರ್ಮಾಣವಾಗಿರುವ 19 ಅಂತಸ್ತಿನ ಕಟ್ಟಡವನ್ನೇ ಕೋವಿಡ್-19 ಆಸ್ಪತ್ರೆಯನ್ನಾಗಿ ಮಾಡಿಕೊಳ್ಳಲು ಬಿಟ್ಟುಕೊಟ್ಟಿದ್ದಾರೆ. ಕೋವಿಡ್-19 ರೋಗಿಗಳಿಗಾಗಿ ಆಸ್ಪತ್ರೆಯನ್ನಾಗಿ ಮಾಡಿಕೊಳ್ಳಲು ಬೃಹನ್ ‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ (ಬಿಎಂಸಿ) ಕಟ್ಟಡವನ್ನು ಹಸ್ತಾಂತರಿಸಿದ್ದಾರೆ.

ಶೀಜಿ ಶರಣ್ ಡೆವಲಪರ್ಸ್‌ನ ಮೆಹುಲ್ ಸಂಘ್ವಿ ಮಾತನಾಡಿ, 'ಬಾಡಿಗೆದಾರರೊಂದಿಗೆ ಚರ್ಚಿಸಿದ ನಂತರ ನಾವು ಇದನ್ನು ಸ್ವ ಇಚ್ಛೆಯಿಂದ ನೀಡಲು ನಿರ್ಧರಿಸಿದ್ದೇವೆ. ಈ ಕಟ್ಟಡವನ್ನು ಕೋವಿಡ್-19 ರೋಗಿಗಳಿಗೆ ಕ್ವಾರಂಟೈನ್‌ ಕೇಂದ್ರಗಳಾಗಿ ಬಳಸಲಾಗುತ್ತಿದೆ' ಎಂದು ತಿಳಿಸಿದ್ದಾರೆ.

ADVERTISEMENT

ಮಲಾಡ್‌ನ ಎಸ್‌ವಿ ರಸ್ತೆಯಲ್ಲಿರುವ ಈ ಕಟ್ಟಡದಲ್ಲಿ 130 ಫ್ಲ್ಯಾಟ್‌ಗಳಿದ್ದು, ಇದಕ್ಕಾಗಿ ರಾಜ್ಯ ಸರ್ಕಾರದಿಂದ ಉದ್ಯೋಗ ಪ್ರಮಾಣಪತ್ರವನ್ನು ಪಡೆದಿದೆ. ವಾಸ್ತವವಾಗಿ ಈ ಕಟ್ಟಡವು ಫ್ಲಾಟ್ ಮಾಲೀಕರಿಗೆ ಹಸ್ತಾಂತರಿಸಲು ಸಿದ್ಧವಾಗಿತ್ತು.

ಇದುವರೆಗೂ 300 ರೋಗಿಗಳನ್ನು ಈ ಕಟ್ಟಡಕ್ಕೆ ವರ್ಗಾಯಿಸಲಾಗಿದ್ದು,ಸದ್ಯ ಕಟ್ಟಡದ ಆವರಣದಲ್ಲಿಯೇ ಸೋಂಕಿತರ ಚಿಕಿತ್ಸೆ ಮುಂದುವರೆದಿದೆ. ಈ ನಡೆಯ ಹಿಂದೆ ಮಲಾಡ್‌ನ ಸಂಸದ ಗೋಪಾಲ್ ಶೆಟ್ಟಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಉತ್ತರ ಮುಂಬೈ ಶಾಸಕರು ಮಾತನಾಡಿ, ನಾನು ಮೆಹುಲ್ ಸಂಘ್ವಿ ಅವರೊಂದಿಗೆ ಸಂಪರ್ಕದಲ್ಲಿದ್ದೆ ಮತ್ತು ಮಲಾಡ್‌ನಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಕಟ್ಟಡವನ್ನು ಕೋವಿಡ್-19 ರೋಗಿಗಳಿಗೆ ಒದಗಿಸುವಂತೆ ಮನವರಿಕೆ ಮಾಡಿಕೊಟ್ಟಿದ್ದೆ. ಈ ಸಂಕಷ್ಟದ ಸಮಯದಲ್ಲಿ ನೆರವಾಗಲು ಮೆಹುಲ್ ಸಂಘ್ವಿಯಂತಹ ಜನರು ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟಿರುವುದು ನಮಗೆ ಸಂತೋಷವಾಗಿದೆ. ಇದರಿಂದಾಗಿ ಇತರರು ಕೂಡ ಮುಂದೆ ಸಾಧ್ಯವಾದಷ್ಟು ಜೀವಗಳನ್ನು ಉಳಿಸಲು ನಮಗೆ ಸಹಾಯ ಮಾಡುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.

ಇನ್ನು ಶನಿವಾರವಷ್ಟೇ ಮಹಾರಾಷ್ಟ್ರದಲ್ಲಿ ಒಂದೇ ದಿನ 3,874 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ಮತ್ತು 160 ಜನರು ಮೃತಪಟ್ಟಿದ್ದರೆ, ಒಟ್ಟಾರೆ ಸೋಂಕಿತರ ಸಂಖ್ಯೆಯು 1,28,205ಕ್ಕೆ ಏರಿಕೆಯಾಗಿದೆ. ಈವರೆಗೂ ರಾಜ್ಯದಲ್ಲಿ 5,984 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಪೈಕಿ ಮುಂಬೈನಲ್ಲೇ 136 ಜನರು ಮೃತಪಟ್ಟಿದ್ದು, 1,197 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆಯು 65,265ಕ್ಕೆ ಏರಿಕೆಯಾಗಿದೆ. 3,559 ಜನರು ಇದುವರೆಗೂ ಮೃತಪಟ್ಟಿರುವುದಾಗಿ ಮಹಾನಗರ ಪಾಲಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.