ADVERTISEMENT

ಕೊರಿಯಾ ಪ್ರವಾಸಕ್ಕೆ ಆಯ್ಕೆಯಾದ ಮುಂಬೈ ಬಾಲಕಿ

ಕೊರಿಯಾ–ಇಂಡಿಯಾ ಫ್ರೆಂಡ್‌ಶಿಪ್‌ ಕ್ವಿಜ್‌ನಲ್ಲಿ ಗೆಲುವು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 11:31 IST
Last Updated 23 ಸೆಪ್ಟೆಂಬರ್ 2020, 11:31 IST
ಅನಶ್ರುತಾ ಗಂಗೂಲಿ
ಅನಶ್ರುತಾ ಗಂಗೂಲಿ   

ಮುಂಬೈ: ಮುಂಬೈ ಹಾಗೂ ಸುತ್ತಮುತ್ತಲಿನ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಕೊರಿಯಾ–ಇಂಡಿಯಾ ಫ್ರೆಂಡ್‌ಶಿಪ್‌ ಕ್ವಿಜ್‌ನಲ್ಲಿ ಅನಶ್ರುತಾ ಗಂಗೂಲಿ ಎಂಬ ಬಾಲಕಿ ಪ್ರಥಮ ಸ್ಥಾನ ಗಳಿಸಿದ್ದು, ದಕ್ಷಿಣ ಕೊರಿಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದಾಳೆ.

ಪ್ರಥಮ ಬಹುಮಾನ 6 ಹಗಲು ಮತ್ತು 5 ರಾತ್ರಿಗಳ ಪ್ರವಾಸದ ಪ್ಯಾಕೇಜ್‌ ಒಳಗೊಂಡಿದ್ದು, ಪ್ರವಾಸದ ಸಂಪೂರ್ಣ ವೆಚ್ಚವನ್ನು ಕೊರಿಯಾ ಸರ್ಕಾರವೇ ಭರಿಸಲಿದೆ.

ಖಾರ್‌ ವೆಸ್ಟ್‌ನ ಜಸುದಬೆನ್‌ ಎಂಎಲ್‌ ಸ್ಕೂಲ್‌ನ ತಾರಿಣಿ ಪಾಡಿಯಾ ಎಂಬ ವಿದ್ಯಾರ್ಥಿನಿ ಎರಡನೇ ಸ್ಥಾನ ಪಡೆದು, ₹ 10,000 ನಗದು ಬಹುಮಾನ ತನ್ನದಾಗಿಸಿಕೊಂಡಳು.

ADVERTISEMENT

‘ಈ ಕ್ವಿಜ್‌ನಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ, ಕೊರಿಯಾ ದೇಶದ ಸಂಸ್ಕೃತಿ, ಇತಿಹಾಸದ ಬಗ್ಗೆ ಇಷ್ಟೊಂದು ಮಾಹಿತಿ ಇರಲಿಲ್ಲ. ಕ್ವಿಜ್‌ಗಾಗಿ ತಯಾರಿ ನಡೆಸಿದಾಗ ಈ ದೇಶ ನಿಜವಾಗಿಯೂ ಅದ್ಭುತವಾಗಿದೆ ಎಂಬುದು ಮನದಟ್ಟಾಯಿತು‘ ಎಂದು ಅನಶ್ರುತಾ ಪ್ರತಿಕ್ರಿಯಿಸಿದ್ದಾಳೆ.

‘ಕ್ವಿಜ್‌ನ ಸಿದ್ಧತೆಗಾಗಿ ನೀಡಿದ್ದ ಅಭ್ಯಾಸ ಸಾಮಗ್ರಿಯಲ್ಲಿ ವಿವರಿಸಿರುವ, ಕೊರಿಯಾದ ಎಲ್ಲ ಸ್ಥಳಗಳಿಗೂ ಭೇಟಿ ನೀಡಲು ನಾನು ಉತ್ಸುಕಳಾಗಿದ್ದೇನೆ. ಭಾರತ ಮತ್ತು ಕೊರಿಯಾ ಬಾಂಧವ್ಯ ಇದೇ ರೀತಿ ಮುಂದುವರಿಯಬೇಕು. ಕ್ವಿಜ್‌ ಸಹ ನಿರಂತರವಾಗಿ ನಡೆಯಬೇಕು. ಆ ದೇಶದ ಸೌಂದರ್ಯ, ಸಂಸ್ಕೃತಿಯ ಪರಿಚಯ ನಮಗಾಗಬೇಕು ಎಂದು ಆಶಿಸುತ್ತೇನೆ‘ ಎಂದೂ ಹೇಳಿದ್ದಾಳೆ.

ಕೊರಿಯನ್‌ ಕಲ್ಚರಲ್‌ ಸೆಂಟರ್– ಇಂಡಿಯಾ ಆಯೋಜಿಸಿದ್ದ ಈ ಕ್ವಿಜ್‌ನಲ್ಲಿ20 ಶಾಲೆಗಳ 10,093 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇತರ 14 ಜನ ವಿಜೇತರಿಗೆ ಒಟ್ಟು ₹ 39,000 ಮೊತ್ತದ ನಗದು ಬಹುಮಾನ ವಿತರಿಸಲಾಯಿತು.

ಕೊರಿಯಾದ ಸಂಸ್ಕೃತಿ, ಇತಿಹಾಸ ಹಾಗೂ ಇತರ ವಿಷಯಗಳ ಕುರಿತು ಭಾರತೀಯ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಎಂದು ಸಂಘಟನೆ ತಿಳಿಸಿದೆ.

ಮುಂಬೈನಲ್ಲಿರುವ ಕೊರಿಯಾದ ಕಾನ್ಸುಲ್‌ ಜನರಲ್‌ ಕಿಮ್‌ ಡಾಂಗ್ ಯಂಗ್‌ ಬಹುಮಾನ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.