
ಮುಂಬೈ: 17 ಮಕ್ಕಳು ಸೇರಿದಂತೆ 19 ಮಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ರೋಹಿತ್ ಆರ್ಯ, ಪೊಲೀಸರು ಒಳಗೆ ಪ್ರವೇಶಿಸುವುದನ್ನು ತಡೆಯಲು, ತನ್ನ ರಕ್ಷಣೆಗಾಗಿ ಭಾರಿ ಬಂದೋಬಸ್ತ್ ಮಾಡಿಕೊಂಡಿದ್ದ ಎಂಬುದು ತಿಳಿದು ಬಂದಿದೆ.
ಪೊಲೀಸರ ಪ್ರವೇಶದ ಕುರಿತು ತಿಳಿದುಕೊಳ್ಳಲು ಆರ್.ಎ. ಸ್ಟುಡಿಯೊದ ಎಲ್ಲಾ ಕಿಟಕಿ, ಬಾಗಿಲುಗಳಿಗೆ ‘ಮೋಷನ್ ಡಿಟೆಕ್ಷನ್ ಸೆನ್ಸರ್’ಗಳನ್ನು (ಚಲನವಲನಗಳನ್ನು ಗ್ರಹಿಸುವ ಸಾಧನ) ಅಳವಡಿಸಿದ್ದ. ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಒಂದೇ ದಿಕ್ಕಿನೆಡೆಗೆ ತಿರುಗಿಸಿದ್ದ ಎಂದು ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದರು.
ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಗುಂಡೇಟು ತಗುಲಿ ರೋಹಿತ್ ಆರ್ಯ ಸಾವಿಗೀಡಾದನು. ಘಟನೆ ಕುರಿತು ಪ್ರಕರಣ ದಾಖಲಿಸಲಾಗಿದ್ದು, ತನಿಖೆಯನ್ನು ಅಪರಾಧ ವಿಭಾಗಕ್ಕೆ ವಹಿಸಲಾಗಿದೆ ಎಂದರು.
ಮಹಾರಾಷ್ಟ್ರ ಶಿಕ್ಷಣ ಇಲಾಖೆ ಜೊತೆಗೆ ರೋಹಿತ್ ಆರ್ಯ ನಿರ್ವಹಿಸಿದ ಯೋಜನೆಗಳ ಮಾಹಿತಿಯನ್ನು ಒದಗಿಸುವಂತೆ ಮಹಾರಾಷ್ಟ್ರ ಸಚಿವ ದಾದಾ ಭುಸೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಚಿತ್ರೀಕರಣದ ಕಥೆ ಕಟ್ಟಿದ್ದ: ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡು ಕೂಡಿ ಹಾಕಿರುವ ಕಥೆಯ ದೃಶ್ಯಗಳನ್ನು ಚಿತ್ರೀಕರಿಸುತ್ತಿರುವುದಾಗಿ ಆರೋಪಿ ರೋಹಿತ್ ಆರ್ಯ ಹೇಳಿದ್ದ ಎಂದು ವಿಡಿಯೊಗ್ರಾಫರ್ ರೋಹನ್ ಹೇಳಿದ್ದಾರೆ. ಇವರು ರೋಹಿತ್ ಜೊತೆ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.