ಮುಂಬೈ: ಮುಂಬೈನಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ವಿದ್ಯುತ್ ಅಡಚಣೆಯಿಂದಾಗಿ ಮೋನೊ ರೈಲೊಂದು ಎರಡು ನಿಲ್ದಾಣಗಳ ನಡುವೆ ಸ್ಥಗಿತಗೊಂಡಿದ್ದು, ರೈಲಿನಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಎಲಿವೇಟೆಡ್ ಹಳಿಯಲ್ಲಿ ಚಲಿಸುವ ರೈಲು ಸ್ಥಗಿತಗೊಂಡು ಒಳಗೆ ಭಯದ ವಾತಾವರಣ ನಿರ್ಮಾಣವಾಗಿದೆ, ಎಸಿ ವ್ಯವಸ್ಥೆ ಸ್ಥಗಿತಗೊಂಡಿದ್ದರಿಂದ ಹಲವು ಜನರು ಉಸಿರುಗಟ್ಟುವಿಕೆಯಿಂದ ಬಳಲುತ್ತಿದ್ದಾರೆ ಎಂದು ರಕ್ಷಿಸಲ್ಪಟ್ಟ ಪ್ರಯಾಣಿಕರೊಬ್ಬರು ಹೇಳಿದ್ದಾರೆ.
ಎಲ್ಲರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡುತ್ತಿದ್ದೇವೆ. ಯಾರೂ ಭಯಭೀತರಾಗಬಾರದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಕೆಲವು ತಾಂತ್ರಿಕ ಕಾರಣಗಳಿಂದಾಗಿ, ಚೆಂಬೂರ್ ಮತ್ತು ಭಕ್ತಿ ಪಾರ್ಕ್ ನಡುವೆ ಮೋನೊರೈಲು ಸಿಲುಕಿಕೊಂಡಿದೆ. ಎಂಎಂಆರ್‌ಡಿಎ (ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ), ಅಗ್ನಿಶಾಮಕ ದಳ ಮತ್ತು ಮುನ್ಸಿಪಲ್ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿವೆ. ಎಲ್ಲ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಫಡಣವೀಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
‘ಎಲ್ಲರೂ ತಾಳ್ಮೆಯಿಂದಿರಲು ನಾನು ವಿನಂತಿಸುತ್ತೇನೆ. ನಾನು ಎಂಎಂಆರ್‌ಡಿಎ ಆಯುಕ್ತರು, ಪುರಸಭೆ ಆಯುಕ್ತರು, ಪೊಲೀಸರು ಮತ್ತು ಎಲ್ಲ ಸಂಬಂಧಿತ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದೇನೆ’ ಎಂದು ತಿಳಿಸಿದ್ದಾರೆ.
ರಾತ್ರಿ 10 ಗಂಟೆಯ ವರದಿಗಳ ಪ್ರಕಾರ, 200 ಪ್ರಯಾಣಿಕರನ್ನು ರೈಲಿನಿಂದ ರಕ್ಷಣೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.