ADVERTISEMENT

ಸೇನಾಧಿಕಾರಿಯ ಪತ್ನಿ ಹತ್ಯೆ ಪ್ರಕರಣ: ಸೇನಾಪಡೆಯ ಮೇಜರ್ ಬಂಧನ

​ಪ್ರಜಾವಾಣಿ ವಾರ್ತೆ
Published 24 ಜೂನ್ 2018, 11:15 IST
Last Updated 24 ಜೂನ್ 2018, 11:15 IST
ನಿಖಿಲ್ ರಾಯ್ ಹಂದಾ  (ಕೃಪೆ:ಎಎನ್‍ಐ)
ನಿಖಿಲ್ ರಾಯ್ ಹಂದಾ (ಕೃಪೆ:ಎಎನ್‍ಐ)   

ಮೀರತ್: ಸೇನಾಧಿಕಾರಿಯೊಬ್ಬರ ಪತ್ನಿಯ ಹತ್ಯೆಗೆಸಂಬಂಧಿಸಿದಂತೆ ಶಂಕಿತ ಆರೋಪಿ ಭಾರತೀಯ ಸೇನಾಪಡೆಯ ಮೇಜರ್ ನಿಖಿಲ್ ರಾಯ್ ಹಂದಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮೀರತ್‍‍ನ ಸದಾರ್ ಎಂಬಲ್ಲಿ ನಿಖಿಲ್ ಅವರನ್ನು ಶನಿವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ನಗರದ ಎಸ್‍ಪಿ ರಣ್‍ವಿಜಯ್ ಸಿಂಗ್ ಹೇಳಿದ್ದಾರೆ.

ಅಮಿತ್ ದ್ವಿವೇದಿ ಎಂಬ ಸೇನಾಧಿಕಾರಿ ಪತ್ನಿ ಶೈಲಜಾ ದ್ವಿವೇದಿ ಮತ್ತು 6 ವರ್ಷದ ಮಗನೊಂದಿಗೆ ಪಶ್ಚಿಮ ದೆಹಲಿಯ ನರೈನಾದಲ್ಲಿರುವ ಸೇನಾ ಕಾರ್ಟರ್ಸ್ ನಲ್ಲಿ ವಾಸವಾಗಿದ್ದರು.ಶೈಲಜಾ ಅವರು ಗೃಹಿಣಿ ಆಗಿದ್ದರು.ದಿಮಾಪುರ್‍‍ನಲ್ಲಿ ನಿಯೋಜಿತರಾಗಿದ್ದ ಅಮಿತ್, ದೆಹಲಿಯಲ್ಲಿ ತರಬೇತಿಗಾಗಿ ಬಂದಿದ್ದರು.

ದೆಹಲಿ ಕಂಟೋನ್‌‍ಮೆಂಟ್ ಮೆಟ್ರೊ ಸ್ಟೇಷನ್‍ ಬಳಿಯಲ್ಲಿರು ಬ್ರಾರ್ ಸ್ಕ್ವೇರ್‍‍ನಲ್ಲಿರುವ ರೈಲ್ವೆ ರಕ್ಷಣಾ ಪಡೆ ಮೆಸ್ ಪಕ್ಕದಲ್ಲಿರುವ ರಸ್ತೆಯೊಂದರಲ್ಲಿ ಶೈಲಜಾ ಅವರ ಮೃತದೇಹ ಶನಿವಾರ ಪತ್ತೆಯಾಗಿತ್ತು.ವಾಹನವೊಂದು ಡಿಕ್ಕಿ ಹೊಡೆದು ಶೈಲಜಾ ಅವರ ಹತ್ಯೆಗೈಯಲಾಗಿತ್ತು ಎಂದು ಪ್ರಾಥಮಿಕ ತನಿಖಾ ವರದಿಗಳು ಹೇಳಿವೆ.

ADVERTISEMENT

ಏನಿದು ಪ್ರಕರಣ?
ಶೈಲಜಾ ಅವರು ಶನಿವಾರ ಬೆಳಗ್ಗೆ 10 ಗಂಟೆಗೆ ಆರ್ಮಿ ಬೇಸ್ ಹಾಸ್ಪಿಟಲ್‍ಗೆ ಹೋಗಿದ್ದರು. ಆಸ್ಪತ್ರೆಯಿಂದ ಆಕೆಯನ್ನು ಮನೆಗೆ ಕರೆತರಲು ಹೋದ ಕಾರಿನ ಚಾಲಕನಲ್ಲಿ ಆಸ್ಪತ್ರೆಯಲ್ಲಿ ಚೆಕ್‍ಅಪ್ ಇನ್ನೂ ಮುಗಿದಿಲ್ಲ ಎಂದು ಶೈಲಜಾ ಹೇಳಿದ್ದರು.ಇದಾದನಂತರ ಅರ್ಧಗಂಟೆಯಲ್ಲಿ ಶೈಲಜಾ ಶವ ಪತ್ತೆಯಾಗಿತ್ತು.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿ ಕಾರಿನಲ್ಲಿ ಅಲ್ಲಿಗೆ ಬಂದಿದ್ದರು ಎಂದು ತನಿಖಾಧಿಕಾರಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಕತ್ತು ಸೀಳಿದ ನಂತರ ಆಕೆಯ ಮೇಲೆ ವಾಹನ ಹರಿಸಿ ಅಪಘಾತ ಎಂದು ಸಾಬೀತು ಮಾಡಲು ಆರೋಪಿ ಯತ್ನಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಈ ಬಗ್ಗೆ ದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಪ್ರತಿಕ್ರಿಯಿಸಿದ ಪೊಲೀಸ್ ಜಂಟಿ ಆಯುಕ್ತ ಮುಧುಪ್ ತಿವಾರಿ, ಪ್ರಾಥಮಿಕ ಮಾಹಿತಿ ಪ್ರಕಾರ ಅದೊಂದು ಅಪಘಾತದಂತೆ ಕಂಡಿತ್ತು, ಆದರೆ ನಮ್ಮ ತನಿಖೆ ಮೂಲಕ ಅದು ಹತ್ಯೆ ಎಂಬುದು ತಿಳಿದುಬಂದಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.