ADVERTISEMENT

ಮುರ್ಶಿದಾಬಾದ್‌ ಹಿಂಸಾಚಾರ, 'ಪೂರ್ವ ಯೋಜಿತ': ಕೇಂದ್ರದ ವಿರುದ್ಧ ಬ್ಯಾನರ್ಜಿ ಕಿಡಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 9:38 IST
Last Updated 16 ಏಪ್ರಿಲ್ 2025, 9:38 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನಲ್ಲಿ ನಡೆದ ಕೋಮುಗಲಭೆ ಪೂರ್ವಯೋಜಿತ. ಕಿಡಿಗೇಡಿಗಳು ಬಾಂಗ್ಲಾದಿಂದ ನುಸುಳಲು ಬಿ‌ಎಸ್ಎಫ್‌, ಕೇಂದ್ರದ ಸಂಸ್ಥೆಗಳು ಮತ್ತು ಬಿಜೆಪಿಯ ಕೆಲವರು ನೆರವಾಗಿದ್ದು, ಉದ್ವಿಗ್ನ ಪರಿಸ್ಥಿತಿ ಉಂಟಾಗಲು ಕಾರಣರಾಗಿದ್ದಾರೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಇಮಾಮ್‌ಗಳ ಜೊತೆಗೆ ಬುಧವಾರ ಇಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ‘ಈಗ ಬಾಂಗ್ಲಾದಲ್ಲಿ ಪ್ರತಿಕೂಲ ಸ್ಥಿತಿ ಇದೆ. ಹಾಗಿದ್ದೂ ಕೇಂದ್ರ ಸರ್ಕಾರವು ಕಿಡಿಗೇಡಿಗಳು ಅಲ್ಲಿಂದ ಅಕ್ರಮವಾಗಿ ಗಡಿದಾಟಲು ನೆರವಾಗಿದೆ’ ಎಂದು ಆರೋಪಿಸಿದರು.

‘ಬಂಗಾಳದಲ್ಲಿ ಶಾಂತಿಭಂಗ ಮಾಡುವಲ್ಲಿ ಬಿಎಸ್‌ಎಫ್‌, ಕೇಂದ್ರದ ಕೆಲ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿವೆ’ ಎಂದು ಅರೋಪಿಸಿದರು. ‘ಕಲ್ಲು ತೂರಾಟ ನಡೆಸಲು ಬಿಎಸ್‌ಎಫ್‌ ಯಾರಿಗೆ ಹಣ ನೀಡಿತ್ತು ಎಂದು ಪತ್ತೆಹಚ್ಚುತ್ತೇನೆ’ ಎಂದು ಹೇಳಿದರು. ಬಿಎಸ್‌ಎಫ್‌ ಪಾತ್ರ ಕುರಿತು ತನಿಖೆಗೆ ನಡೆಸಬೇಕು ಎಂದು ಮುಖ್ಯಕಾರ್ಯದರ್ಶಿಗೆ ಆದೇಶಿಸಿದರು.

ADVERTISEMENT

‘ಕ್ರೂರ’ವಾಗಿರುವ ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಬಾರದು. ಅಮಿತ್ ಶಾ ನೇತೃತ್ವದ ಕೇಂದ್ರ ಗೃಹ ಸಚಿವಾಲಯವನ್ನು ಹದ್ದುಬಸ್ತಿನಲ್ಲಿ ಇಡಬೇಕು’ ಎಂದೂ ಮಮತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದರು.

‘ಶಾ ಅವರ ನಡೆ ಕುರಿತು ಕಣ್ಗಾವಲಿಡಬೇಕು. ಅವರು ತಮ್ಮ ರಾಜಕೀಯ ಕಾರ್ಯಸೂಚಿ ಜಾರಿಗೆ ದೇಶವನ್ನೇ ಅಪಾಯಕ್ಕೆ ದೂಡುತ್ತಿದ್ದಾರೆ. ಅವರ ಚಲನವಲನದ ಮೇಲೆ ಕಣ್ಣಿಡಬೇಕು’ ಎಂದು ಆಗ್ರಹಿಸಿದರು.

ಬಾಂಗ್ಲಾದೇಶದಿಂದ ಅಕ್ರಮವಾಗಿ ಕಿಡಿಗೇಡಿಗಳು ಗಡಿಯನ್ನು ದಾಟಲು, ಗಡಿ ರಕ್ಷಣೆ ಹೊಣೆ ಹೊತ್ತಿರುವ ಬಿಎಸ್ಎಫ್‌ ಕಾರಣ. ಈ ವೈಫಲ್ಯದ ಹೊಣೆಯನ್ನು ನೇರವಾಗಿ ಕೇಂದ್ರ ಸರ್ಕಾರವೇ ಹೊರಬೇಕು’ ಎಂದರು.

ಪರಿಹಾರ ಘೋಷಣೆ: ಕೋಮುಗಲಭೆಯಲ್ಲಿ ಮೃತಪಟ್ಟಿದ್ದ ಮೂವರ ಕುಟುಂಬಗಳಿಗೆ ಮಮತಾ ಅವರು ತಲಾ ₹10 ಲಕ್ಷ ಪರಿಹಾರವನ್ನು ಘೋಷಿಸಿದರು. 

ಪಶ್ಚಿಮ ಬಂಗಾಳದಲ್ಲಿ ಹಿಂದೂಗಳು ಆತಂಕ ಭೀತಿಯಿಂದ ಬದುಕುತ್ತಿದ್ದಾರೆ. ಪ್ರಕ್ಷುಬ್ಧ ಸ್ಥಿತಿ ಇದ್ದರೂ ಮಮತಾ ಬ್ಯಾನರ್ಜಿ ಸರ್ಕಾರ ಮೂಕಪ್ರೇಕ್ಷಕನಂತಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು
ನರೇಶ್ ಮಾಸ್ಕೆ ಶಿವಸೇನಾ (ಶಿಂದೆ ಬಣ) ವಕ್ತಾರ ಸಂಸದ
ವಕ್ಫ್‌ ಕಾಯ್ದೆ ವಿರೋಧಿಸುವ ಮಮತಾ ಬ್ಯಾನರ್ಜಿ ವೋಟ್‌ಬ್ಯಾಂಕ್‌ಗಾಗಿ ಇನ್ನು ಎಷ್ಟು ಕೀಳುಮಟ್ಟಕ್ಕೆ ಇಳಿಯಲಿದ್ದಾರೆ. ಅವರ ‌ನಡೆ ಸ್ವೀಕಾರಾರ್ಹವಲ್ಲ. ಬಂಗಾಳದ ಬೆಳವಣಿಗೆ ಗಮನಿಸಿದರೆ ರಾಜ್ಯ ಸರ್ಕಾರದ ದಿನಗಣನೆ ಆರಂಭವಾದಂತಿದೆ.
ರವಿಶಂಕರ ಪ್ರಸಾದ್ ಬಿಜೆಪಿ ನಾಯಕ

ಲೈಂಗಿಕ ದೌರ್ಜನ್ಯ ತನಿಖೆಗೆಸಮಿತಿ ರಚಿಸಲು ನಿರ್ಧಾರ ನವದೆಹಲಿ (ಪಿಟಿಐ): ‘ಮುರ್ಶಿದಾಬಾದ್‌ನಲ್ಲಿ ಕೋಮುಗಲಭೆ ವೇಳೆ ಹಲವು ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನಡೆದಿದೆ’ ಎಂಬ ಆರೋಪದ ತನಿಖೆಗೆ ಸಮಿತಿ ರಚಿಸಲು ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯೂ) ನಿರ್ಧರಿಸಿದೆ.  ‘ಅಧ್ಯಕ್ಷೆ ವಿಜಯಾ ರಹತ್ಕರ್ ಅವರು ಸ್ವಯಂಪ್ರೇರಿತವಾಗಿ ಈ ಬಗ್ಗೆ ಗಮನಹರಿಸಿ ಸಮಿತಿ ರಚಿಸಲು ಆದೇಶಿಸಿದ್ದಾರೆ. ಅಲ್ಲದೆ ಬಾಧಿತ ಸ್ಥಳಗಳಿಗೂ ಅವರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದು ಸಂತ್ರಸ್ತರ ಅಭಿಪ್ರಾಯವನ್ನು ಆಲಿಸಲಿದ್ದಾರೆ’ ಎಂದು ಆಯೋಗದ ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.