ADVERTISEMENT

ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಲು ಮುಸ್ಲಿಂ ಮಂಡಳಿಗೆ ಸಾಧ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 4:21 IST
Last Updated 18 ನವೆಂಬರ್ 2019, 4:21 IST
ವರುಣ್ ಸಿನ್ಹಾ
ವರುಣ್ ಸಿನ್ಹಾ   

ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದದಲ್ಲಿನ ಕಕ್ಷಿದಾರರೇ ಅಲ್ಲದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ)ಗೆ ತೀರ್ಪು ಮರುಪರಿಶೀಲನೆ ಅರ್ಜಿ ಸಲ್ಲಿಸಲು ಯಾವುದೇ ಹಕ್ಕು ಇರುವುದಿಲ್ಲ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ವಕೀಲ ವರುಣ್ ಸಿನ್ಹಾ ತಿಳಿಸಿದ್ದಾರೆ.

ಅಯೋಧ್ಯೆ ವ್ಯಾಜ್ಯದ ಸಂಬಂಧ ಎಐಎಂಪಿಎಲ್‌ಬಿ ಕಕ್ಷಿದಾರನಲ್ಲ. ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲು ಸುನ್ನಿ ವಕ್ಫ್ ಮಂಡಳಿ ನಿರ್ಧರಿಸಬಹುದು. ಅದರಂತೆಪ್ರಕರಣಕ್ಕೆ ಸಂಬಂದಿಸಿದ ಕಕ್ಷಿದಾರರು ಮಾತ್ರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.

ಈ ವಿಷಯದ ಪ್ರತಿಯೊಂದು ಅಂಶವನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿದೆ ಮತ್ತು ಮುಸ್ಲಿಮರು ಎನ್ನುವ ಕಾರಣಕ್ಕೆ ವಿವಾದಿತ ಸ್ಥಳದ ಮೇಲೆ ಹಕ್ಕು ಮಂಡಿಸಲು ಸಾಧ್ಯವಿಲ್ಲ ಎಂದು ಈ ತೀರ್ಮಾನಕ್ಕೆ ಬಂದಿದೆ. ಸಂವಿಧಾನದ ವಿಧಿ 142ರ ಅಡಿಯಲ್ಲಿ ಸುಪ್ರೀಂ ನೀಡಿರುವ ತೀರ್ಪಿನಲ್ಲಿ ಎಐಎಂಪಿಎಲ್‌ಬಿ ಹೇಗೆ ತಪ್ಪನ್ನು ಹುಡುಕಲು ಹೊರಟಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ ಎಂದು ತಿಳಿಸಿದರು.

ADVERTISEMENT

ಮುಸ್ಲಿಮರಿಗೆ ನೀಡಿರುವ 5 ಎಕರೆ ಪ್ರತ್ಯೇಕ ಭೂಮಿಯನ್ನು ನಿರಾಕರಿಸಿರುವ ಎಐಎಂಪಿಎಲ್‌ಬಿ ಮತ್ತು ಜಮೀಯತ್‌ ಉಲೇಮಾ ಎ ಹಿಂದ್‌ ಸಂಘಟನೆ ಅಯೋಧ್ಯೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಭಾನುವಾರ ನಿರ್ಧರಿಸಿದ್ದವು.

ವಿವಾದಾತ್ಮಕವಾಗಿದ್ದ 2.77 ಎಕರೆ ನಿವೇಶನವನ್ನು ರಾಮಲಲ್ಲಾಗೆ ನೀಡಬೇಕು. ಟ್ರಸ್ಟ್ ನಿರ್ಮಿಸಿ ದೇಗುಲ ನಿರ್ಮಾಣದ ಜವಾಬ್ದಾರಿಯನ್ನು ಅದಕ್ಕೆ ನೀಡಬೇಕು. ಅಲ್ಲದೆ ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ ಐದು ಎಕರೆ ಪರ್ಯಾಯ ಜಮೀನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಇದೇ 9ರಂದು ತೀರ್ಪು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.