ADVERTISEMENT

ವಾರಾಣಸಿಯ ಜ್ಞಾನವಾಪಿ ಮಸೀದಿ ವಿಡಿಯೊ ಚಿತ್ರೀಕರಣಕ್ಕೆ ವಿರೋಧ: ಏನಿದು ಪ್ರಕರಣ?

ಐಎಎನ್ಎಸ್
Published 11 ಮೇ 2022, 5:20 IST
Last Updated 11 ಮೇ 2022, 5:20 IST
ಜ್ಞಾನವಾಪಿ ಮಸೀದಿ - ಪಿಟಿಐ ಸಂಗ್ರಹ ಚಿತ್ರ
ಜ್ಞಾನವಾಪಿ ಮಸೀದಿ - ಪಿಟಿಐ ಸಂಗ್ರಹ ಚಿತ್ರ   

ವಾರಾಣಸಿ: ಜ್ಞಾನವಾಪಿ ಮಸೀದಿ ಆವರಣದೊಳಗೆ ವಿಡಿಯೊ ಚಿತ್ರೀಕರಣ ಮಾಡುವುದು ‘1991ರ ಪೂಜಾ ಸ್ಥಳಗಳ ಕಾಯ್ದೆ’ಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ‘ಇಂಡೊ–ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್)’ ಹೇಳಿದೆ.ಈ ಕಾಯ್ದೆಯು, ಧಾರ್ಮಿಕ ಆರಾಧನಾ ಸ್ಥಳವು1947ರ ಆಗಸ್ಟ್ 15ರಂದು ಇದ್ದ ಸ್ವರೂಪವನ್ನೇ ಉಳಿಸಿಕೊಳ್ಳುವುದಕ್ಕೆ ಸಂಬಂಧಿಸಿದ್ದಾಗಿದೆ.

ವಿಡಿಯೊ ಚಿತ್ರೀಕರಣ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆಹೋಗುವುದಾಗಿಯೂ ಐಐಸಿಎಫ್ ತಿಳಿಸಿದೆ.

‘1991ರ ಪೂಜಾ ಸ್ಥಳಗಳ ಕಾಯ್ದೆಯ ಅನುಷ್ಠಾನಕ್ಕಾಗಿ ನಾವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಿದ್ದೇವೆ. ಅಯೋಧ್ಯೆಯ ರಾಮ ಜನ್ಮಭೂಮಿಯನ್ನು ಹೊರತುಪಡಿಸಿ ದೇಶದ ಯಾವುದೇ ಪೂಜಾ ಸ್ಥಳದ ಸ್ಥಿತಿಯನ್ನು ಪ್ರಶ್ನಿಸುವುದು 2019ರ ನವೆಂಬರ್ 9ರ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸಿದಂತೆ’ ಎಂದು ಐಐಸಿಎಫ್ ಕಾರ್ಯದರ್ಶಿ ಅತ್ತರ್ ಹುಸೇನ್ ಹೇಳಿದ್ದಾರೆ.

ADVERTISEMENT

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣದ ಮೇಲ್ವಿಚಾರಣೆಗಾಗಿ ಸೆಂಟ್ರಲ್‌ ವಕ್ಫ್‌ ಮಂಡಳಿಯು ರಚಿಸಿರುವ ಟ್ರಸ್ಟ್ ಈ ಇಂಡೊ–ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಆಗಿದೆ.

ಏನಿದು ಜ್ಞಾನವಾಪಿ ಮಸೀದಿ ಪ್ರಕರಣ?

ವಾರಾಣಸಿಯ ಜ್ಞಾನವಾಪಿ ಮಸೀದಿಯ ಹೊರ ಗೋಡೆಗೆ ತಾಗಿಕೊಂಡೇ ಇರುವ ಶೃಂಗಾರ ಗೌರಿ, ಗಣೇಶ, ಹನುಮಾನ್‌ ಮತ್ತು ನಂದಿ ವಿಗ್ರಹಗಳಿಗೆ ಪೂಜೆ ನೆರವೇರಿಸುವುದಕ್ಕೆ ಅವಕಾಶ ನೀಡಬೇಕು ಎಂದು ಕೋರಿ ದೆಹಲಿ ಮೂಲದ ರಾಖಿ ಸಿಂಗ್‌, ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತು ಇತರರು 2021ರ ಏಪ್ರಿಲ್‌ 21ರಂದು ವಾರಾಣಸಿಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಲ್ಲಿನ ದೇವತಾ ವಿಗ್ರಹಗಳಿಗೆ ಯಾವುದೇ ಹಾನಿ ಉಂಟುಮಾಡದಂತೆ ಸೂಚಿಸಬೇಕು ಎಂದು ಕೋರಿದ್ದರು.

ಈ ವಿಚಾರವಾಗಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಈದ್‌ ಹಬ್ಬದ ನಂತರ ಮತ್ತು ಮೇ 10 ರೊಳಗೆ ಕಾಶಿ ವಿಶ್ವನಾಥ ಮಂದಿರ– ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ವಿಡಿಯೊ ಚಿತ್ರೀಕರಣ ನಡೆಸುವಂತೆ ಏಪ್ರಿಲ್‌ 26 ರಂದು ಆದೇಶಿಸಿತ್ತು. ವಿಡಿಯೊ ಚಿತ್ರೀಕರಣದ ವೇಳೆ ಅಡ್ವೊಕೇಟ್ ಕಮಿಷನರ್‌, ಎರಡೂ ಕಡೆಯ ಕಕ್ಷಿದಾರರು ಮತ್ತು ಒಬ್ಬ ಸಹಾಯಕ ಮಾತ್ರ ಇರಬಹುದು ಎಂದು ತಿಳಿಸಲಾಗಿತ್ತು. ಇದರಂತೆ ಮೇ 6 ಮತ್ತು 7 ರಂದು ವಿಡಿಯೊ ಚಿತ್ರೀಕರಣ ನಡೆಸಲು ಉದ್ದೇಶಸಲಾಗಿತ್ತು. ಆದರೆ ವಿಡಿಯೊ ಚಿತ್ರೀಕರಣ ಮತ್ತು ಸಮೀಕ್ಷೆ ನಡೆಸಲು ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿ ಅವಕಾಶ ನೀಡಿರಲಿಲ್ಲ.

ಈ ಮಧ್ಯೆ,ಬಾಬರಿ ಮಸೀದಿಯಂತೆ ಜ್ಞಾನವಾಪಿ ಮಸೀದಿಯನ್ನೂ ಕೆಡವಲಾಗುವುದು ಎಂದು ಬಿಜೆಪಿ ನಾಯಕ ಸಂಗೀತ್ ಸೋಮ್ ಹೇಳಿರುವುದು ವಿವಾದ ಸೃಷ್ಟಿಸಿದೆ. ಮೀರತ್‌ನಲ್ಲಿ ಸೋಮವಾರ ಸಮಾರಂಭವೊಂದರಲ್ಲಿ ಮಾತನಾಡಿದ್ದ ಸಂಗೀತ್ ಸೋಮ್, ‘1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತು. ಈಗ ಜ್ಞಾನವ್ಯಾಪಿ ಮಸೀದಿಯ ಸರದಿ. 2022ರಲ್ಲಿ ನಾವು ಈ ಮಸೀದಿಯನ್ನು ಕೆಡವುತ್ತೇವೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.