ಕೆ. ಕವಿತಾ
ಹೈದರಾಬಾದ್: ಹಿಂದುಳಿದ ವರ್ಗಗಳಿಗೆ ಶೇಕಡ 42ರಷ್ಟು ಮೀಸಲಾತಿಗೆ ಆಗ್ರಹಿಸಿ ತೆಲಂಗಾಣ ಜಾಗೃತಿ ಮುಖ್ಯಸ್ಥೆ ಮತ್ತು ವಿಧಾನ ಪರಿಷತ್ ಸದಸ್ಯೆ ಕೆ.ಕವಿತಾ ಅವರು ಸೋಮವಾರದಿಂದ 72 ಗಂಟೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗಗಳೊಂದಿಗೆ ಸೇರ್ಪಡೆ ಮಾಡದೆ ಅವರಿಗೆ ಪ್ರತ್ಯೇಕವಾಗಿ ಶೇ 10ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಹಿಂದುಳಿದ ವರ್ಗಗಳ ಮೀಸಲಾತಿಗಾಗಿ ‘ತೆಲಂಗಾಣ ಜಾಗೃತಿ’ಯು ಸಾಕಷ್ಟು ಹೋರಾಟ ನಡೆಸಿದೆ. ರಾಜ್ಯ ಸ್ಥಾನಮಾನ ಪಡೆದ ಬಳಿಕ ಸಾಕಷ್ಟು ಸಾಧಿಸಿದ್ದೇವೆ, ಪ್ರತಿಯೊಬ್ಬ ನಾಗರಿಕರಿಗೂ ಅವರ ಪಾಲಿನದ್ದು ಸಿಗಬೇಕು ಎಂದು ಹೇಳಿದರು.
‘ತೆಲಂಗಾಣ ಜಾಗೃತಿ ಸಮಿತಿ ಹೋರಾಟದ ಫಲವಾಗಿ ಹಿಂದುಳಿದ ವರ್ಗಗಳ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನವನ್ನು ಮಹಿಳಾ ಶಿಕ್ಷಕರ ದಿನ ಎಂದು ಘೋಷಿಸಲಾಗಿದೆ’ ಎಂದರು.
ಹಿಂದುಳಿದ ವರ್ಗಗಳ (ಬಿ.ಸಿ) ಮೀಸಲಾತಿಯನ್ನು ಶೇ 42ಕ್ಕೆ ಏರಿಸುವ ಮತ್ತು ಪರಿಶಿಷ್ಟ ಜಾತಿಯ (ಎಸ್‌ಸಿ) ಉಪವರ್ಗೀಕರಣಕ್ಕೆ ಸಂಬಂಧಿಸಿದ ಎರಡು ಮಹತ್ವದ ಮಸೂದೆಗಳಿಗೆ ತೆಲಂಗಾಣ ವಿಧಾನಸಭೆ ಮಾರ್ಚ್‌ನಲ್ಲಿ ಅಂಗೀಕಾರ ನೀಡಿತ್ತು.
ಸರ್ಕಾರ ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯುತ್ತಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಮಸೂದೆಗಳಿಗೆ ರಾಷ್ಟ್ರಪತಿಗಳ ಅನುಮೋದನೆ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಮತ್ತು ಇತರೆ ಕಾಂಗ್ರೆಸ್ ನಾಯಕರು ಆಗಸ್ಟ್ 6ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಲು ಮುಂದಾಗಿದ್ದಾರೆ ಎಂದು ಕವಿತಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.