ADVERTISEMENT

ಮುಸ್ಲಿಮರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುತ್ತಿರುವ ಬಿಜೆಪಿ ಸರ್ಕಾರ: ಮಾಯಾವತಿ

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಆರೋಪ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 11:15 IST
Last Updated 4 ಸೆಪ್ಟೆಂಬರ್ 2020, 11:15 IST
ಮಾಯಾವತಿ
ಮಾಯಾವತಿ   

ಲಖನೌ: ಉತ್ತರ ಪ್ರದೇಶದ ಬಿಜೆಪಿ ಸರ್ಕಾರವುಉದ್ದೇಶಪೂರ್ವಕವಾಗಿ ಮುಸ್ಲಿಮರನ್ನೂ ಗುರಿಯಾಗಿಸಿ, ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.

ರಾಜ್ಯದ ವಿವಿಧೆಡೆ ಬಿ.ಆರ್. ಅಂಬೇಡ್ಕರ್‌ ಪ್ರತಿಮೆಗಳನ್ನು ಹಾಳುಗೆಡವಿರುವ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿರುವ ಅವರು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹಿಂದೆ ರಾಜ್ಯದಲ್ಲಿ ಸಮಾಜವಾದಿ ಪಕ್ಷ ಆಡಳಿತದಲ್ಲಿದ್ದಾಗ, ಬ್ರಾಹ್ಮಣರು ಮತ್ತು ದಲಿತರು ದಬ್ಬಾಳಿಕೆಗೆ ಒಳಗಾಗಿದ್ದರು. ಪ್ರಸ್ತುತ ಬಿಜೆಪಿ ಆಡಳಿತದಲ್ಲಿ, ಆ ಎರಡು ಸಮುದಾಯದವರ ಜತೆಗೆ, ಮುಸ್ಲಿಂ ಸಮುದಾಯದವರನ್ನು ಗುರಿಯಾಗಿಸಲಾಗುತ್ತಿದೆ. ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಇದು ದುರಾದೃಷ್ಟಕರ ವಿಚಾರ’ ಎಂದು ಮಾಯಾವತಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ADVERTISEMENT

‘ಸಮಾಜವಾದಿ ಪಕ್ಷ ಆಡಳಿತದ ಅವಧಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಧಕ್ಕೆ ಉಂಟು ಮಾಡಲಾಯಿತು ಮತ್ತು ಜಿಲ್ಲೆ ಮತ್ತು ಕೆಲವೊಂದು ಸಂಸ್ಥೆಗಳ ಹೆಸರನ್ನೇ ಬದಲಿಸಿದರು. ಅದೇ ರೀತಿಯ ಕೆಲಸಗಳು ಬಿಜೆಪಿ ಆಡಳಿತದಲ್ಲೂ ಮುಂದುವರಿದಿದೆ’ ಎಂದು ಅವರು ಟೀಕಿಸಿದ್ದಾರೆ.

‘ಮೊದಲು ವಾರಾಣಸಿಯಲ್ಲಿಅಂಬೇಡ್ಕರ್ ಪ್ರತಿಮೆಗೆ ಹಾನಿಮಾಡಲಾಗಿತ್ತು. ಈಗ ಅಂಥದ್ದೇ ಘಟನೆ ಜೌನ್‌ಪುರದಲ್ಲೂ ನಡೆದಿದೆ. ಇದು ಖಂಡನೀಯ. ಸರ್ಕಾರ ಇಂಥ ಪ್ರಕರಣಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.