ADVERTISEMENT

ಮಥುರಾದ ಮಸೀದಿಯನ್ನು ಮುಸ್ಲಿಮರು ಹಿಂದೂಗಳಿಗೆ ಹಸ್ತಾಂತರಿಸಬೇಕು: ಸಚಿವ ಶುಕ್ಲಾ

ಉತ್ತರ ಪ್ರದೇಶ ಸಚಿವ ಆನಂದಸ್ವರೂಪ್ ಶುಕ್ಲಾ ಹೇಳಿಕೆ

ಪಿಟಿಐ
Published 7 ಡಿಸೆಂಬರ್ 2021, 11:31 IST
Last Updated 7 ಡಿಸೆಂಬರ್ 2021, 11:31 IST
ಮಥುರಾದಲ್ಲಿರುವ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನ ಹಾಗೂ ಶಾಹಿ ಈದ್ಗಾ ಮಸೀದಿ – ಪಿಟಿಐ ಚಿತ್ರ
ಮಥುರಾದಲ್ಲಿರುವ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನ ಹಾಗೂ ಶಾಹಿ ಈದ್ಗಾ ಮಸೀದಿ – ಪಿಟಿಐ ಚಿತ್ರ   

ಬಲಿಯಾ, ಉತ್ತರ ಪ್ರದೇಶ: ಮಥುರಾದಲ್ಲಿ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನ ಸಮೀಪದಲ್ಲಿರುವ ಮಸೀದಿಯನ್ನು ಮುಸ್ಲಿಮರು ಹಿಂದೂಗಳಿಗೆ ಹಸ್ತಾಂತರ ಮಾಡಬೇಕು ಎಂದು ಉತ್ತರ ಪ್ರದೇಶದ ಸಂಸದೀಯ ವ್ಯವಹಾರ ಖಾತೆ ರಾಜ್ಯ ಸಚಿವ ಆನಂದಸ್ವರೂಪ್‌ ಶುಕ್ಲಾ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಥುರಾದಲ್ಲಿರುವ ‘ಶ್ವೇತವರ್ಣದ ಕಟ್ಟಡಗಳು’ ಹಿಂದೂಗಳಿಗೆ ನೋವುವನ್ನುಂಟು ಮಾಡುತ್ತವೆ. ಕೋರ್ಟ್‌ನಿಂದ ಆದೇಶ ಪಡೆದು, ಇಂಥ ಕಟ್ಟಡಗಳನ್ನು ತೆರವುಗೊಳಿಸುವ ಕಾಲ ಬರುತ್ತದೆ’ ಎಂದು ಹೇಳಿದ್ದಾರೆ.

‘ಅಯೋಧ್ಯಾ ವಿವಾದವನ್ನು ಕೋರ್ಟ್ ಬಗೆಹರಿಸಿದೆ. ಆದರೆ, ವಾರಾಣಸಿ ಹಾಗೂ ಮಥುರಾಗಳಲ್ಲಿರುವ ‘ಶ್ವೇತವರ್ಣದ ಕಟ್ಟಡಗಳು’ ಹಿಂದೂಗಳಿಗೆ ನೋವನ್ನುಂಟು ಮಾಡುತ್ತಿವೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

‘ರಾಮ ಮತ್ತು ಕೃಷ್ಣರನ್ನು ತಮ್ಮ ಪೂರ್ವಜರು ಹಾಗೂ ಬಾಬರ್, ಅಕ್ಬರ್‌ ಮತ್ತು ಔರಂಗಜೇಬ್ ದಾಳಿಕೋರರು ಎಂಬುದನ್ನು ಮುಸ್ಲಿಮರು ಒಪ್ಪಿಕೊಳ್ಳಬೇಕು ಎಂಬುದಾಗಿ ರಾಮಮನೋಹರ್ ಲೋಹಿಯಾ ಅವರೇ ಹೇಳಿದ್ದಾರೆ. ಹೀಗಾಗಿ ಈ ದಾಳಿಕೋರರು ನಿರ್ಮಿಸಿದ ಕಟ್ಟಡಗಳೊಂದಿಗೆ ಮುಸ್ಲಿಮರು ಸಂಬಂಧ ಹೊಂದಬಾರದು’ ಎಂದು ಸಚಿವ ಶುಕ್ಲಾ ಹೇಳಿದರು.

ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ಸೈಯದ್ ವಾಸೀಂ ರಿಜ್ವಿ ಅವರು ಸನಾತನ ಧರ್ಮ ಸ್ವೀಕರಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವ ಶುಕ್ಲಾ, ‘ರಿಜ್ವಿ ಅವರ ಈ ಧೈರ್ಯದ ನಡೆಯನ್ನು ಸ್ವಾಗತಿಸುತ್ತೇನೆ’ ಎಂದರು.

‘ದೇಶದಲ್ಲಿರುವ ಎಲ್ಲ ಮುಸ್ಲಿಮರು ಹಿಂದೂ ಧರ್ಮಕ್ಕೆ ಮರಳಬೇಕು. ಇತಿಹಾಸವನ್ನು ಅವಲೋಕಿಸಿದರೆ,200–250 ವರ್ಷಗಳ ಹಿಂದೆ ದೇಶದಲ್ಲಿರುವ ಎಲ್ಲ ಮುಸ್ಲಿಮರು ಮತಾಂತರಗೊಂಡಿದ್ದರು ಎಂಬುದು ತಿಳಿಯುತ್ತದೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.