ADVERTISEMENT

‘ರಾಜೀವ್‌ ಪ್ರವಾಸಕ್ಕೆ ವಿರಾಟ್ ಬಳಸಿಲ್ಲ’

ಯುದ್ಧನೌಕೆ ಬಳಕೆ ಆರೋಪ * ನೌಕಾಪಡೆ ನಿವೃತ್ತ ಅಧಿಕಾರಿಗಳ ಸ್ಪಷ್ಟನೆ

ಪಿಟಿಐ
Published 9 ಮೇ 2019, 20:17 IST
Last Updated 9 ಮೇ 2019, 20:17 IST
   

ನವದೆಹಲಿ: ‘ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ನೌಕಾಪಡೆಯ ಐಎನ್‌ಎಸ್‌ ವಿರಾಟ್‌ ನೌಕೆಯನ್ನು ತಮ್ಮ ವೈಯಕ್ತಿಕ ಪ್ರಯಾಣಕ್ಕೆ ಬಳಸಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಆರೋಪ ಸುಳ್ಳು’ ಎಂದು ನೌಕಾಪಡೆಯ ನಿವೃತ್ತ ಅಧಿಕಾರಿಗಳು ಹೇಳಿದ್ದಾರೆ.

ರಾಜೀವ್ ತಮ್ಮ ಕುಟುಂಬದ ಜತೆ 10 ದಿನ ರಜೆ (1987ರಲ್ಲಿ) ಕಳೆಯಲು ಐಎನ್‌ಎಸ್‌ ವಿರಾಟ್ ನೌಕೆಯನ್ನು ಬಳಸಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಆರೋಪಿಸಿದ್ದರು.

‘‌ರಾಜೀವ್ ಗಾಂಧಿ ಅವರು ತಿರುವನಂತಪುರದಿಂದ ಅಧಿಕೃತ ಕರ್ತವ್ಯದ ನಿಮಿತ್ತ ಲಕ್ಷದ್ವೀಪಕ್ಕೆ ತೆರಳಬೇಕಿತ್ತು. ಲಕ್ಷದ್ವೀಪದಲ್ಲಿ ದ್ವೀಪ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಲಿತ್ತು. ಆ ಸಭೆಯಲ್ಲಿ ಭಾಗವಹಿಸಲು ಅವರು ಐಎನ್‌ಎಸ್‌ ವಿರಾಟ್ ನೌಕೆ ಮೂಲಕ ಅಲ್ಲಿಗೆ ತೆರಳಿದ್ದರು. ಅದು ಅಧಿಕೃತ ಪ್ರಯಾಣವಾಗಿತ್ತು’ ಎಂದು ನೌಕಾಪಡೆಯ ನಿವೃತ್ತ ಉಪ ಅಡ್ಮಿರಲ್ ಎಲ್‌.ರಾಮದಾಸ್ ಹೇಳಿದ್ದಾರೆ. ಇವರು 1987ರಲ್ಲಿ ನೌಕಾಪಡೆಯ ಪಶ್ಚಿಮ ಕಮಾಂಡ್‌ನ ಮುಖ್ಯಸ್ಥರಾಗಿದ್ದರು.

ADVERTISEMENT

‘ರಾಜೀವ್ ಗಾಂಧಿ, ಸೋನಿಯಾ ಮತ್ತು ಇಬ್ಬರು ಐಎಎಸ್‌ ಅಧಿಕಾರಿಗಳ ಹೊರತಾಗಿ ಇತರ ವ್ಯಕ್ತಿಗಳು ಅವರ ಜತೆಯಲ್ಲಿ ಇರಲಿಲ್ಲ. ತಿರುವನಂತಪುರದಲ್ಲಿ ನೌಕೆಯನ್ನು ಲಂಗರು ಹಾಕಲು ಸಾಧ್ಯವಿಲ್ಲದಿದ್ದ ಕಾರಣ. ಹೆಲಿಕಾಪ್ಟರ್ ಮೂಲಕ ಅವರನ್ನು ನೌಕೆಗೆ ಕರೆಸಿಕೊಳ್ಳಲಾಗಿತ್ತು. ಲಕ್ಷದ್ವೀಪದಲ್ಲೂ ಅವರು ಸಭೆಗೆ ತೆರಳಲು ಹೆಲಿಕಾಪ್ಟರ್‌ ಅನ್ನೇ ಬಳಸಿದ್ದರು’ ಎಂದು ನೌಕಾಪಡೆಯ ನಿವೃತ್ತ ಅಧಿಕಾರಿ ವಿನೋದ್ ಪಸ್ರಿಚಾ ಹೇಳಿದ್ದಾರೆ. ರಾಜೀವ್ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದಾಗ ವಿನೋದ್ ಅವರು ಐಎನ್‌ಎಸ್‌ ವಿರಾಟ್‌ನ ಕ್ಯಾಪ್ಟನ್‌ಆಗಿದ್ದರು.

ಆ ಭೇಟಿಯ ಸಂದರ್ಭದಲ್ಲಿ ಲಕ್ಷದ್ವೀಪದ ಆಡಳಿತಾಧಿಕಾರಿಯಾಗಿದ್ದ ವಜಾಹತ್ ಹಬೀಬುಲ್ಲಾ ಸಹ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.

ರಜೆ ಕಳೆದಿದ್ದರು

‘ರಾಜೀವ್ ಮತ್ತು ಸೋನಿಯಾ ಅವರು ಬಂಗಾರಂ ದ್ವೀಪದಲ್ಲಿ ರಜೆ ಕಳೆಯಲು ಐಎನ್‌ಎಸ್ ವಿರಾಟ್ ಬಳಸಿಕೊಂಡಿದ್ದರು. ಆಗ ನಾನು ಆ ನೌಕೆಯಲ್ಲೇ ಕರ್ತವ್ಯದಲ್ಲಿದ್ದೆ’ ಎಂದು ವಿ.ಕೆ.ಜೇಟ್ಲಿ (@vkjaitly) ಎಂಬ ನೌಕಾಪಡೆಯ ನಿವೃತ್ತ ಅಧಿಕಾರಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ವಿ.ಕೆ.ಜೇಟ್ಲಿ ಅವರು ಟ್ವಿಟರ್‌ನಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯ ಹಿಂಬಾಲಕರಾಗಿದ್ದಾರೆ. ಮೋದಿಯನ್ನು ಹೊಗಳಿ, ರಾಹುಲ್ ಗಾಂಧಿ ಅವರನ್ನು ತೆಗಳಿ ಅವರು ಹಲವು ಟ್ವೀಟ್ ಮಾಡಿದ್ದಾರೆ.

* ಪ್ರಧಾನಿ ಮೋದಿ ಹೇಳಿಕೆ ಸಂಪೂರ್ಣ ತಪ್ಪು. ರಾಜೀವ್ ಗಾಂಧಿ ಅವರದ್ದು ಅಧಿಕೃತ ಭೇಟಿ. ಅವರು ಭೇಟಿ ನೀಡಿದ್ದಾಗ ಎಲ್ಲಾ ಶಿಷ್ಟಾಚಾರಗಳನ್ನು ಪಾಲಿಸಲಾಗಿತ್ತು ವಿನೋದ್ ಪಸ್ರಿಚಾ

– ನೌಕಾಪಡೆಯ ನಿವೃತ್ತ ಉಪ ಅಡ್ಮಿರಲ್

* ಪ್ರಧಾನಿಯಾಗಿರುವವರು ಅಧಿಕೃತ ಭೇಟಿ/ಪ್ರವಾಸಗಳಲ್ಲಿ ತಮ್ಮ ಪತ್ನಿ ಅಥವಾ ಪತಿಯನ್ನು ಕರೆದೊಯ್ಯಲು ಅವಕಾಶವಿದೆ

– ಎಲ್‌.ರಾಮದಾಸ್, ನೌಕಾಪಡೆಯ ನಿವೃತ್ತ ಉಪ ಅಡ್ಮಿರಲ್

* ರಾಜಕಾರಣಿಗಳು ಮತದಾರರನ್ನು ಸೆಳೆಯಲು ಇಂತಹ ಸುಳ್ಳು ಹೇಳುತ್ತಿರುವುದು ವಿಷಾದನೀಯ. ಇದರಿಂದ ನಿಜವೂ ಸುಳ್ಳು ಎನಿಸುವ ಅಪಾಯವಿದೆ

– ಐ.ಸಿ.ರಾವ್, ನಿವೃತ್ತ ಉಪ ಅಡ್ಮಿರಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.