ADVERTISEMENT

ಯುಪಿಯಲ್ಲಿ ಅಪ್ನಾ ದಳ, ನಿಶಾದ್ ಪಕ್ಷದ ಜೊತೆ ಬಿಜೆಪಿ ಮೈತ್ರಿ: ನಡ್ಡಾ ಘೋಷಣೆ

ಪಿಟಿಐ
Published 19 ಜನವರಿ 2022, 13:34 IST
Last Updated 19 ಜನವರಿ 2022, 13:34 IST
ಜೆ.ಪಿ. ನಡ್ಡಾ: ಪಿಟಿಐ ಚಿತ್ರ
ಜೆ.ಪಿ. ನಡ್ಡಾ: ಪಿಟಿಐ ಚಿತ್ರ   

ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹಿಂದುಳಿದ ಜಾತಿಗಳ ಬೆಂಬಲವಿರುವ ಅಪ್ನಾ ದಳ ಮತ್ತು ನಿಶಾದ್ ಪಾರ್ಟಿಯೊಂದಿಗೆ ಜಂಟಿಯಾಗಿ ಬಿಜೆಪಿ 403 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬುಧವಾರ ಘೋಷಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಡ್ಡಾ, ರಾಜ್ಯದಲ್ಲಿನ ಮೂರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪಾಲುದಾರ ಪಕ್ಷಗಳ ಅಭ್ಯರ್ಥಿಗಳು 403 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡಲಿದ್ದಾರೆ ಎಂದು ಹೇಳಿದರು.

ಇದೇವೇಳೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಮರುಸ್ಥಾಪಿಸುವುದು ಸೇರಿದಂತೆ ಹಲವಾರು ವಿಷಯಗಳಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ಕಾರ್ಯಕ್ಷಮತೆಯನ್ನು ಅವರು ಶ್ಲಾಘಿಸಿದರು.

ADVERTISEMENT

ಅಪ್ನಾ ದಳದ ಮುಖ್ಯಸ್ಥೆ, ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಮತ್ತು ನಿಶಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಶಾದ್ ಅವರು ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಇತರ ಹಿಂದುಳಿದ ವರ್ಗಗಳ (ಒಬಿಸಿ) ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.ವಿರೋಧ ಪಕ್ಷಗಳು ಅಧಿಕ ಪ್ರಮಾಣದಲ್ಲಿರುವ ಹಿಂದುಳಿದ ಸಮುದಾಯಗಳಿಗೆ ಅವರ ಹಕ್ಕುಗಳನ್ನು ನಿರಾಕರಿಸಿವೆ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಎನ್‌ಡಿಎ ಮತ್ತೆ ಸರ್ಕಾರ ರಚಿಸಲಿದೆ ಎಂದು ಮಿತ್ರಪಕ್ಷಗಳ ನಾಯಕರು ಹೇಳಿದ್ದು, ರಾಜ್ಯ ಸರ್ಕಾರದ ಕೆಲಸಗಳನ್ನು ಕೊಂಡಾಡಿದರು. ಯಾವ ಪಕ್ಷ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂಬ ವಿವರಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಉತ್ತರ ಪ್ರದೇಶದಲ್ಲಿದ್ದ ಸರ್ಕಾರಕ್ಕೆ ಮಾಫಿಯಾ ನಂಟಿತ್ತು. ಆದರೆ, ಯೋಗಿ ಆದಿತ್ಯನಾಥ್ ಸರ್ಕಾರವು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಿದೆ ಮತ್ತು ಹೂಡಿಕೆಯ ತಾಣವಾಗಿ ಮಾಡಿದೆ ಎಂದು ನಡ್ಡಾ ಹೇಳಿದ್ದಾರೆ. ಈ ಹಿಂದೆ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದರು ಎಂದು ಅವರು ಆರೋಪಿಸಿದರು.

'ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಅಧಿಕಾರದಲ್ಲಿರುವ ಬಿಜೆಪಿ ಉತ್ತರ ಪ್ರದೇಶದಲ್ಲಿ ಸಾಮಾಜಿಕ ಸುಧಾರಣೆಯನ್ನು ಮಾಡಿದೆ. ಸಂಪರ್ಕ ಮತ್ತು ಶಿಕ್ಷಣ, ವಿಶೇಷವಾಗಿ ವೈದ್ಯಕೀಯ ಶಿಕ್ಷಣ ಉತ್ತೇಜನವನ್ನು ಪಡೆಯುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.