ADVERTISEMENT

ನಾಗಾಲ್ಯಾಂಡ್‌: ಸೇನೆಯ ವಿಶೇಷಾಧಿಕಾರ ರದ್ದುಪಡಿಸಲು ಹೆಚ್ಚಿದ ಒತ್ತಡ

ಆಫ್‌ಸ್ಪ ವಾಪಸ್‌ ಪಡೆಯಲು ನಾಗಾಲ್ಯಾಂಡ್‌ ಒತ್ತಾಯ l ಹಾರ್ನ್‌ಬಿಲ್ ಉತ್ಸವ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 5:27 IST
Last Updated 6 ಡಿಸೆಂಬರ್ 2021, 5:27 IST
ಸೈನಿಕರ ಗುಂಡಿಗೆ ಬಲಿಯಾದ ನಾಗರಿಕರ ಶವಗಳನ್ನು ಕೊನ್ಯಾಕ್ ಮುರಾಂಗ ಸಂಘಟನೆ ಕಚೇರಿ ಎದುರು ಇರಿಸಲಾಗಿತ್ತು (ಎಡಚಿತ್ರ) ನಾಗಾಲ್ಯಾಂಡ್‌ನ ಕಿಸಾಮಾದಲ್ಲಿ ನಡೆಯುತ್ತಿರುವ ಹಾರ್ನ್‌ಬಿಲ್ ಉತ್ಸವದ ಸ್ಥಳಗಳಲ್ಲಿ ‘ಸೇನೆಯ ವಿಶೇಷಾಧಿಕಾರ ರದ್ದು ಮಾಡಿ’ ಎಂದು ಒತ್ತಾಯಿಸುವ ಪೋಸ್ಟರ್‌ಗಳನ್ನು ಹಾಕಲಾಗಿತ್ತು –ಪಿಟಿಐ ಚಿತ್ರಗಳು
ಸೈನಿಕರ ಗುಂಡಿಗೆ ಬಲಿಯಾದ ನಾಗರಿಕರ ಶವಗಳನ್ನು ಕೊನ್ಯಾಕ್ ಮುರಾಂಗ ಸಂಘಟನೆ ಕಚೇರಿ ಎದುರು ಇರಿಸಲಾಗಿತ್ತು (ಎಡಚಿತ್ರ) ನಾಗಾಲ್ಯಾಂಡ್‌ನ ಕಿಸಾಮಾದಲ್ಲಿ ನಡೆಯುತ್ತಿರುವ ಹಾರ್ನ್‌ಬಿಲ್ ಉತ್ಸವದ ಸ್ಥಳಗಳಲ್ಲಿ ‘ಸೇನೆಯ ವಿಶೇಷಾಧಿಕಾರ ರದ್ದು ಮಾಡಿ’ ಎಂದು ಒತ್ತಾಯಿಸುವ ಪೋಸ್ಟರ್‌ಗಳನ್ನು ಹಾಕಲಾಗಿತ್ತು –ಪಿಟಿಐ ಚಿತ್ರಗಳು   

ಕೊಹಿಮಾ/ಗುವಾಹಟಿ: ‘ಸೇನೆಗೆ ನೀಡಿರುವ ರಕ್ತಪಿಪಾಸು ವಿಶೇಷಾಧಿಕಾರವನ್ನು ತಕ್ಷಣವೇ ರದ್ದುಪಡಿಸಿ’. ‘ನಾಗರಿಕರ ಹತ್ಯೆಯ ಹೊಣೆಗಾರಿಯಿಂದ ಸೈನಿಕರಿಗೆ ರಕ್ಷಣೆ ನೀಡುವ ವಿಶೇಷಾಧಿಕಾರವನ್ನು ತಕ್ಷಣವೇ ವಜಾ ಮಾಡಿ’.

ಸಾಮಾಜಿಕ ಜಾಲತಾಣಗಳಲ್ಲಿ#Nagaland ಹ್ಯಾಷ್‌ಟ್ಯಾಗ್‌ನಲ್ಲಿ ನಾಗಾಲ್ಯಾಂಡ್‌ ಸೇರಿ ಈಶಾನ್ಯ ಭಾರತದ ರಾಜ್ಯಗಳ ಜನರು ಮಾಡುತ್ತಿರುವ ಆಗ್ರಹವಿದು. ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯ ಟಿರು ಮತ್ತು ಒಟಿಂಗ್‌ನಲ್ಲಿ ಸೈನಿಕರ ಗುಂಡಿಗೆ ನಿರಾಯುಧ ಗ್ರಾಮಸ್ಥರು ಬಲಿಯಾದ ನಂತರ ಸೇನೆಯ ವಿಶೇಷಾಧಿಕಾರ ರದ್ದು ಮಾಡಿ ಎಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.

ಈಶಾನ್ಯ ಭಾರತದ ಗಲಭೆ ಮತ್ತು ಸಂಘರ್ಷ ಪೀಡಿತ ರಾಜ್ಯಗಳಾದ ನಾಗಾಲ್ಯಾಂಡ್, ಮಣಿಪುರ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಆಯ್ದ ಭಾಗಗಳಲ್ಲಿ ಕಾರ್ಯಾಚರಣೆ ನಡೆಸುವ ಸೇನೆಯ ವಿವಿಧ ಪಡೆಗಳಿಗೆ ವಿಶೇಷಾಧಿಕಾರವಿದೆ. 1958ರಲ್ಲಿ ‘ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ (ಆಫ್‌ಸ್ಪ) ಮೂಲಕ ವಿಶೇಷಾಧಿಕಾರ ನೀಡಲಾಗಿತ್ತು.ವ್ಯಕ್ತಿಯೊಬ್ಬ ಕಾನೂನನ್ನು ಉಲ್ಲಂಘಿಸಿದ ಎಂದು ಸೈನಿಕರು ಭಾವಿಸಿದರೆ, ಆ ವ್ಯಕ್ತಿಯ ಮೇಲೆ ಗುಂಡು ಹಾರಿಸಬಹುದು. ವಾರಂಟ್ ಇಲ್ಲದೆ ಯಾವುದೇ ವ್ಯಕ್ತಿಯ ಮನೆಯನ್ನು ತಪಾಸಣೆ ಮಾಡಬಹುದು ಮತ್ತು ಬಂಧಿಸಬಹುದು ಎಂದು ವಿಶೇಷಧಿಕಾರವು ಹೇಳುತ್ತದೆ.

ADVERTISEMENT

‘ಟಿರು ಮತ್ತು ಒಟಿಂಗ್‌ನಲ್ಲಿ ನಾಗರಿಕರ ಮೇಲೆ ಗುಂಡು ಹಾರಿಸಿದ ಸೈನಿಕರು ಸಹ ಈ ಕಾಯ್ದೆಯ ಅಡಿ ರಕ್ಷಣೆ ಪಡೆಯಬಹುದು. ಅವರನ್ನು ಖುಲಾಸೆ ಮಾಡಬಹುದು. ಹೀಗಾಗಿ ಈ ಕಾಯ್ದೆಯನ್ನು ತಕ್ಷಣವೇ ರದ್ದುಪಡಿಸಬೇಕು’ ಎಂದು ನಾಗಾಲ್ಯಾಂಡ್‌ನ ಕೂಕಿ ವಿದ್ಯಾರ್ಥಿ ಸಂಘಟನೆ ಆಗ್ರಹಿಸಿದೆ.

‘1958ರಲ್ಲಿ ಸೇನೆಗೆ ಆಫ್‌ಸ್ಪ ಮೂಲಕ ‘ಕೊಲ್ಲುವ ಪರವಾನಗಿ’ ನೀಡಿದ ನಂತರ ಈಶಾನ್ಯ ಭಾರತವು ಸೇನೆಯ ಹತ್ಯಾಕ್ಷೇತ್ರವಾಗಿದೆ. ಬ್ರಿಟಿಷರ ಕಾಲದಲ್ಲಿಯೇ ಈ ಆಫ್ಸ್‌ಪವನ್ನು ಜಾರಿಗೆ ತರಲಾಗಿತ್ತು. ಅದೇ ಕಾನೂನನ್ನು ಪ್ರಜಾಪ್ರಭುತ್ವದಲ್ಲಿಯೂ ಮುಂದುವರಿಸಲು ಸಾಧ್ಯವಿಲ್ಲ. ಇದನ್ನು ತಕ್ಷಣವೇ ವಾಪಸ್ ಪಡೆಯಬೇಕು. ಮೊನ್ ಜಿಲ್ಲೆಯಲ್ಲಿನ ಹತ್ಯಾಕಾಂಡವು 1984ರ ಹಿರಾಂಗೊಯಿತಾಂಗ್‌ ಹತ್ಯಾಕಾಂಡ, 2000ರ ಮಾಲೊಮ್ ಹತ್ಯಾಕಾಂಡ ಮತ್ತು ಮಣಿಪುರದ ರಿಮ್ಸ್ ಹತ್ಯಾಕಾಂಡವನ್ನು ನೆನಪಿಸುತ್ತಿದೆ’ ಎಂದು ಮಣಿಪುರದಲ್ಲಿನ ಮಾನವ ಹಕ್ಕುಗಳ ಕಾರ್ಯಕರ್ತೆ ಬಿನಲಕ್ಷ್ಮಿ ನೆಪ್ರಾನ್ ಹೇಳಿದ್ದಾರೆ.

‘ಈ ರಾಜ್ಯಗಳಲ್ಲಿ, ಗಡಿಯಾಚೆಯಿಂದ ಬೆಂಬಲ ಹೊಂದಿರುವ ಉಗ್ರರು ಸೃಷ್ಟಿಸುವ ಸನ್ನಿವೇಶಗಳನ್ನು ಎದುರಿಸಲು ವಿಶೇಷ ಅಧಿಕಾರ ಸೇನೆಗೆ ಬೇಕೇಬೇಕು’ ಎಂದು ಸೇನೆ ಅಧಿಕಾರಿಗಳು ಹೇಳಿದ್ದಾರೆ.

ಭುಗಿಲೆದ್ದ ಆಕ್ರೋಶ

ಸೈನಿಕರಿಂದ ನಾಗರಿಕರ ಹತ್ಯೆಯನ್ನು ಖಂಡಿಸಿ ನಾಗಾಲ್ಯಾಂಡ್‌ನ ಹಲವು ಬುಡಕಟ್ಟು ಜನರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈಗ ನಾಗಾಲ್ಯಾಂಡ್‌ನಲ್ಲಿ ಪ್ರಖ್ಯಾತ ‘ಹಾರ್ನ್‌ಬಿಲ್‌ ಉತ್ಸವ’ ನಡೆಯುತ್ತಿದೆ. ಈ ಉತ್ಸವವನ್ನು ಆರು ಬುಡಕಟ್ಟು ಸಮುದಾಯಗಳು ಬಹಿಷ್ಕರಿಸಿವೆ.

ಹಾರ್ನ್‌ಬಿಲ್ ಉತ್ಸವ ನಡೆಯುತ್ತಿರುವ ಸ್ಥಳಗಳಲ್ಲಿ ‘ಅಫ್‌ಸ್ಪ ಕಾಯ್ದೆಯನ್ನು ತಕ್ಷಣವೇ ವಾಪಸ್ ಪಡೆಯಿರಿ’ ಎಂಬ ಬರಹ ಇರುವ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಉತ್ಸವದ ಸ್ಥಳಗಳಲ್ಲಿ ಭಾನುವಾರ ಕಪ್ಪು ಬಾವುಟವನ್ನು ಹಾರಿಸಿ, ಕರಾಳ ದಿನ ಆಚರಿಸಲಾಗಿದೆ.

ಮೊನ್‌ ಜಿಲ್ಲೆಯ ಹಲವೆಡೆ ಭಾನುವಾರ ಸಂಜೆಯ ನಂತರ ಪ್ರತಿಭಟನೆ ನಡೆದಿವೆ. ಅಸ್ಸಾಂ ರೈಫಲ್ಸ್‌ನ ಸೇನಾ ಶಿಬಿರಗಳು, ಚೆಕ್‌ಪೋಸ್ಟ್‌ಗಳ ಮೇಲೆ ನಾಗರಿಕರು ದಾಳಿ ನಡೆಸಿದ್ದಾರೆ. ಹಲವೆಡೆ ಚೆಕ್‌ಪೋಸ್ಟ್‌ಗಳಿಗೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಸೈನಿಕರ ಗುಂಡಿಗೆ ಬಲಿಯಾದ ನಾಗರಿಕರ ಅಂತ್ಯ ಸಂಸ್ಕಾರದ ವಿಚಾರದಲ್ಲೂ ಗಲಭೆ ನಡೆದಿದೆ. ಇಲ್ಲಿನ ಕೊಯಾಂಕ್‌ ಬುಡಕಟ್ಟು ಜನರ ಸಂಘಟನೆಯ ಕೇಂದ್ರ ಕಚೇರಿ ಎದುರು ಮೃತರ ಶವಗಳನ್ನು ತರಲಾಗಿತ್ತು. ಅಲ್ಲಿ ಸಾವಿರಾರು ಜನರು ಸೇರಿದ್ದರು.‌ಭಾನುವಾರವೇ ಅಂತ್ಯಸಂಸ್ಕಾರ ನಡೆಸಲು ಮೊದಲು ತೀರ್ಮಾನಿಸಲಾಗಿತ್ತು. ಆದರೆ ಅಂತ್ಯಸಂಸ್ಕಾರವನ್ನು ಸೋಮವಾರಕ್ಕೆ ಮುಂದೂಡಲಾಯಿತು. ಇದರಿಂದ ಆಕ್ರೋಶಗೊಂಡ ಜನರು ಸಂಘಟನೆಯ ಕಚೇರಿಯ ಒಳನುಗ್ಗಿ, ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ.

***

ರಾಜ್ಯ ಸರ್ಕಾರವು ಉನ್ನತಮಟ್ಟದ ತನಿಖಾ ತಂಡವನ್ನು ರಚಿಸಿದೆ. ಸಂತ್ರಸ್ತರ ಕುಟುಂಬಗಳಿಗೆ ತನಿಖೆಯ ಮೂಲಕ ನ್ಯಾಯ ಒದಗಿಸಲಾಗುತ್ತದೆ

-ಅಮಿತ್ ಶಾ, ಕೇಂದ್ರ ಗೃಹ ಸಚಿವ

***

ಇದು ಅತ್ಯಂತ ಖಂಡನೀಯ ಕೃತ್ಯ. ಸಂತ್ರಸ್ತರಿಗೆ ನ್ಯಾಯ ಒದಗಿಸಲಾಗುತ್ತದೆ. ಆದರೆ ಇದು ಸಮಾಜದ ಎಲ್ಲರೂ ಶಾಂತಿ ಕಾಪಾಡಬೇಕಾದ ಸಮಯ

-ನೆಫಿಯು ರಿಯೊ, ನಾಗಾಲ್ಯಾಂಡ್ ಮುಖ್ಯಮಂತ್ರಿ

***

ಸರ್ಕಾರ ನಿಜಹೇಳಬೇಕು. ದೇಶದಲ್ಲಿ ನಾಗರಿಕರು ಮತ್ತು ಸೈನಿಕರೂ ಸುರಕ್ಷಿತವಲ್ಲ. ಗೃಹ ಸಚಿವಾಲಯ ಮಾಡುತ್ತಿರುವುದಾದರೂ ಏನು?

-ರಾಹುಲ್ ಗಾಂಧಿ, ಕಾಂಗ್ರೆಸ್‌ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.