ADVERTISEMENT

ಸಿಬಿಐಗೆ ರಾವ್‌ ನೇಮಕ ಪ್ರಶ್ನಿಸಿ ‘ಸುಪ್ರೀಂ’ಗೆ ಅರ್ಜಿ

ಪಿಟಿಐ
Published 14 ಜನವರಿ 2019, 18:33 IST
Last Updated 14 ಜನವರಿ 2019, 18:33 IST

ನವದೆಹಲಿ: ಸಿಬಿಐನ ಮಧ್ಯಂತರ ನಿರ್ದೇಶಕರಾಗಿ ಎಂ. ನಾಗೇಶ್ವರ ರಾವ್‌ ಅವರ ನೇಮಕವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ‘ಕಾಮನ್‌ ಕಾಸ್‌’ ಎನ್‌ಜಿಒ ಅರ್ಜಿ ಸಲ್ಲಿಸಿದೆ.

ಸಿಬಿಐ ನಿರ್ದೇಶಕರಾಗಿದ್ದ ಅಲೋಕ್‌ ವರ್ಮಾ ಅವರನ್ನು ಭ್ರಷ್ಟಾಚಾರ ಮತ್ತು ಕರ್ತವ್ಯಲೋಪದ ಆರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಸಮಿತಿಯು ವರ್ಗಾವಣೆ ಮಾಡಿತ್ತು. ಹೊಸ ನಿರ್ದೇಶಕರ ನೇಮಕ ಆಗುವತನಕ ನಾಗೇಶ್ವರ ರಾವ್‌ ಅವರನ್ನು ನೇಮಿಸಲಾಗಿದೆ.

ಸಿಬಿಐ ನಿರ್ದೇಶಕರ ನೇಮಕ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಅಗತ್ಯವಾದ ನಿಯಮಗಳನ್ನು ರೂಪಿಸಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿದೆ.

ADVERTISEMENT

‘ನಿರ್ದೇಶಕರ ಆಯ್ಕೆ ಸಮಿತಿಯ ಗಮನಕ್ಕೇ ತಾರದೆ ರಾವ್‌ ಅವರ ನೇಮಕ ಮಾಡಲಾಗಿದೆ. ಹಾಗಾಗಿ, ಸಿಬಿಐ ನಿರ್ದೇಶಕರ ನೇಮಕ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ರಾವ್‌ ಅವರ ನೇಮಕವು ಕಾನೂನುಬಾಹಿರ’ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಸಿಬಿಐನ ಮಧ್ಯಂತರ ನಿರ್ದೇಶಕರಾಗಿ ರಾವ್‌ ಅವರನ್ನು ಕಳೆದ ಅಕ್ಟೋಬರ್‌ 23ರಂದು ಸರ್ಕಾರ ನೇಮಿಸಿತ್ತು. ಅದನ್ನು ಇದೇ 8ರಂದು ಸುಪ್ರೀಂ ಕೋರ್ಟ್‌ ರದ್ದು ಮಾಡಿತ್ತು. ಮತ್ತೆ ಅವರನ್ನು ಅದೇ ಹುದ್ದೆಗೆ ನೇಮಕ ಮಾಡಿರುವುದು ದುರುದ್ದೇಶಪೂರಿತ ಮತ್ತು ಕಾನೂನುಬಾಹಿರ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.